ಹಳೆಗುಡಗನಟ್ಟಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

   ಹಳೆಗುಡಗನಟ್ಟಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ  Free health check-up camp in Halegudaganatti village

ಲೋಕದರ್ಶನ ವರದಿ 

ಯಮಕನಮರಡಿ   27: ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ, ಫೋರ್ಸೈಟ್ ಫೌಂಡೇಶನ್ ಹಾಗೂ ಐಐಟಿ ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.  ಶಿಬಿರದಲ್ಲಿ ಗ್ರಾಮಸ್ಥರಿಗೆ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ ನೋಂದಣಿ ಹಾಗೂ ಇ-ಶ್ರಮ ಕಾರ್ಡ್‌ ನೋಂದಣಿ ಸೌಲಭ್ಯಗಳನ್ನು ಒದಗಿಸಲಾಯಿತು. ಶಿಬಿರದಲ್ಲಿ 105  ಫಲಾನುಭವಿಗಳು ಆಯುಷ್ಮಾನ್ ಭಾರತ್ ಹಾಗೂ ಇ-ಶ್ರಮ ಕಾರ್ಡ್ಗಳನ್ನು ಮಾಡಿಸಿಕೊಂಡು ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯುವ ಅವಕಾಶವನ್ನು ಪಡೆದರು.  

ಈ ಸಂದರ್ಭದಲ್ಲಿ  ವೈದ್ಯಾಧಿಕಾರಿ ಯತಿರಾಜ್ ದೇಶಪಾಂಡೆ ಜೀವನಶೈಲಿ, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಯೋಜನಾ ಸಂಯೋಜಕರಾದ ಶ್ರೀಮತಿ ಸುರೇಖಾ ಪಾಟೀಲ ಅವರು ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ ಹಾಗೂ ಸರ್ಕಾರಿ ಆರೋಗ್ಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಆರೋಗ್ಯವಂತ ಮಹಿಳೆಯೇ ಆರೋಗ್ಯವಂತ ಕುಟುಂಬ ಮತ್ತು ಸಮಾಜ ನಿರ್ಮಾಣದ ಆಧಾರ ಎಂದು ಅವರು ತಿಳಿಸಿದರು.  ಗ್ರಾಮದ ಮಹಿಳೆಯರು ಹಾಗೂ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದು ಆಯೋಜಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.