ಬಾವಿಯಲ್ಲಿ ಬಿದ್ದ ನರಿ: ಅರಣ್ಯ, ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ

ದೇವರಹಿಪ್ಪರಗಿ 27: ಆಯ ತಪ್ಪಿ ನೂರು ಅಡಿ ಆಳದ ಬಾವಿಯಲ್ಲಿ ಬಿದ್ದ ನರಿಯನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಹಯೋಗದಲ್ಲಿ ಗುರುವಾರದಂದು ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.  

ತಾಲೂಕಿನ ಕೆರೂಟಗಿ ಗ್ರಾಮದ ಸಿದ್ರಾಮಪ್ಪ ಬಿರಾದಾರ ಅವರ ತೋಟದ ಬಾವಿಯಲ್ಲಿ ನರಿ ಬಿದ್ದಿರುವುದನ್ನು ಗುರುವಾರ ಸಾಯಂಕಾಲ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗ್ರಾಮಸ್ಥರು ತಿಳಿಸಿದರು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಬಾವಿಯಲ್ಲಿದ್ದ ನರಿ ರಕ್ಷಿಸಲು ಗುರುವಾರ ಮಧ್ಯರಾತ್ರಿಯವರೆಗೂ ರಕ್ಷಣಾ ಕಾರ್ಯ ನಡೆಯಿತು.   

ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸುರಕ್ಷಿತವಾಗಿ ಬಾವಿಯಿಂದ ನರಿಯನ್ನು ಜೀವಂತವಾಗಿ ರಕ್ಷಿಸಿ ಇಲಾಖೆಗೆ ಒಪ್ಪಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.  

ರಕ್ಷಣಾ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ರಾಜು ಬಿರಾದಾರ, ಉಪವಲಯ ಅರಣ್ಯ ಅಧಿಕಾರಿ ಎಸ್‌.ಎಸ್‌.ಬಿರಾದಾರ, ಗಸ್ತು ಅರಣ್ಯ ಪಾಲಕ ಎಂ.ಬಿ.ಕಂಟಿಕರ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಮಚೇಂದ್ರ, ಮಾಂತೇಶ, ವಿ.ಟಿ.ಪರಸಪ್ಪಗೋಳ, ಎಸ್‌. ಎಸ್‌. ಮಠ, ಸಿದ್ದಣ್ಣ ರೋಡಗಿ, ಅಶೋಕ ರಾಠೋಡ, ಸಂತೋಷ ರಾಠೋಡ, ಶ್ರೀಧರ ರತ್ನಪ್ಪಗೋಳ ಸೇರಿದಂತೆ ಗ್ರಾಮದ ಹಲವಾರು ಜನ ಮುಖಂಡರು ಭಾಗಿಯಾಗಿದ್ದರು.