ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಗ್ಗ ಜಗ್ಗಾಟದ ನಡುವೆ ಮತ್ತೆ ಕಾಂಗ್ರೆಸ್ ಸೇರ್ಪಡೆ

ಶಿರಹಟ್ಟಿ 27: ಶಿರಹಟ್ಟಿ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹುಟ್ಟಿಕೊಂಡು ರಾಮಕೃಷ್ಣ ದೊಡ್ಡಮನೆಯವರಿಗೆ ಹೈಕಮಾಂಡ್ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದ ಕಾರಣ ರಾಮಕೃಷ್ಣ ದೊಡ್ಡಮನಿ ಅಭಿಮಾನಿ ಬಳಗದ ಸಾವಿರಾರು ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. 

ಸಧ್ಯಕ್ಕೆ ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಎಲ್ಲರು ಸೇರಿ ಬಲಪಡಿಸಬೇಕೆಂದು ಟ್ರಬಲ್ ಶೂಟರ್ ಡಿಕೆ ಶಿವಕುಮಾರ ಅವರನ್ನು ರಾಮಕೃಷ್ಣ ದೊಡ್ಡಮನಿ ಬೆಂಗಳೂರಿನಲ್ಲಿ ಭೇಟಿ ಆದಾಗ ಕಾಂಗ್ರೆಸ್ ಪಕ್ಷವನ್ನು ಸೇರಲು ಡಿಕೆಸಿ ಅವರು ಒಪ್ಪಿಗೆ ಸೂಚಿಸಿದ್ದರು. ಕೆಲವು ಜಿಲ್ಲಾ ಮುಖಂಡರು ರಾಮಕೃಷ್ಣ ದೊಡ್ಡಮನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ ಕಾರಣ ಎಲ್ಲ ರಾಮಕೃಷ್ಣ ದೊಡ್ಡಮನಿ ಅಭಿಮಾನಿ ಬಳಗದವರು ಪಕ್ಷ ತೊರೆಯೇಬೇಕೆಂದು ನಿರ್ಧರಿಸಿ ಸೋಮವಾರ ಸಾಯಂಕಾಲ ತಾಲೂಕಿನ ತಾರಿಕೊಪ್ಪ ಗ್ರಾಮದಲ್ಲಿ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಸಭೆ ಸೇರಿದ್ದರು. 

ತಾರಿಕೊಪ್ಪ ಗ್ರಾಮದ ಈ ಸಭೆಗೆ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಹಾವೇರಿ ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರ ತಂದೆ ಹಾಗೂ ಮಾಜಿ ಶಾಸಕರಾದ ಜಿಎಸ್ ಗಡ್ಡದೇವರಮಠ ಅವರು ಸಭೆಗೆ ಆಗಮಿಸಿದ ಕೂಡಲೇ ಸ್ವಾಭಿಮಾನಿ ರಾಮಕೃಷ್ಣ ಅಭಿಮಾನಿ ಬಳಗದ ಕೆಲವು ಸದಸ್ಯರು ಯಾವುದೇ ರೀತಿಯ ಆಹ್ವಾನ ನಿಮಗೆ ನಾವು ನೀಡಿಲ್ಲ, ನಮ್ಮ ರಾಮಕೃಷ್ಣ ದೊಡ್ಡಮನಿಯವರಿಗೆ ಟಿಕೆಟ್ ಕೈತಪ್ಪಿದ್ದಾಗ ನೀವೆಲ್ಲ ಎಲ್ಲಿಗೆ ಹೋಗಿದ್ರಿ, ಈಗ ನಿಮ್ಮ ಮಗನಿಗೆ ಹಾವೇರಿ ಗದಗ ಲೋಕಸಭಾ ಟಿಕೆಟ್ ಸಿಕ್ಕಿದ್ದರ ಕಾರಣ ಇಂದು ನೀವು ಇಲ್ಲಿಗೆ ಓಡಿ ಬಂದಿದ್ದೀರಿ, ನಿಮಗೆ ನಾವು ಯಾವುದೇ ರೀತಿಯ ಆಹ್ಹಾನ ನೀಡಿಲ್ಲ ಎಂದು ಕಾರ್ಯಕರ್ತರು ಜಿಎಸ್ ಗಡ್ಡದೇವರಮಠ ಅವರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 

ಆದರೂ ಕೂಡ ರಾಮಕೃಷ್ಣ ದೊಡ್ಡಮನಿಯವರು ನಾವೆಲ್ಲ ಕಾಂಗ್ರೆಸ್ ಪಕ್ಷದಲ್ಲಿಯೇ ಇರೋಣ ಇಲ್ಲ ಬೇಡವೋ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಅಭಿಪ್ರಾಯ ಕೇಳಿದಾಗ ಎಲ್ಲ ಕಾರ್ಯಕರ್ತರು ನಮಗೆ ಕಾಂಗ್ರೆಸ್ ಪಕ್ಷದಲ್ಲಿ ಮಲತಾಯಿ ಧೋರಣೆ ಉಂಟಾಗಿದೆ. ಕಾಂಗ್ರೆಸ್ ಪಕ್ಷ ಸೇರುವುದೋ ಬೇಡವೋ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದಾಗ, ರಾಮಕೃಷ್ಣ ದೊಡ್ಡಮನಿ ಅವರು ಏನೋ ಕೆಲವೊಂದು ತಪ್ಪಾಗಿದೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಬೇಡ, ದೊಡ್ಡವರು ಮಹತ್ವದ ತಪ್ಪು ಮಾಡಿದ್ದನ್ನು ಅವರೇ ಅನುಭವಿಸುತ್ತಾರೆ. ನನಗೆ ವಿಧಾನ ಸಭಾ ಕ್ಷೇತ್ರದ ಟಿಕೇಟ್ ಕೈ ತಪ್ಪುವುದಕ್ಕೆ ಅವರೇ ನೇರ ಕಾರಣ. ಆದರೂ ಕೂಡ ಎಲ್ಲರೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರೋಣ ಎಂದು ವಿನಂತಿಸಿದಾಗ ಎಲ್ಲ ಕಾರ್ಯಕರ್ತರು ಇನ್ನು ಮುಂದೆ ಈವೆರೆಗೂ ಆದ ಮಲತಾಯಿ ಧೋರಣೆಯನ್ನು ಕೈ ಬಿಟ್ಟರೇ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯುವಂತೆ ಒಪ್ಪಿಗೆ ಸೂಚಿಸಿದರು. 

ಈ ಸಭೆಯಲ್ಲಿ ಸ್ವಾಭಿಮಾನಿ ರಾಮಕೃಷ್ಣ ದೊಡ್ಡಮನಿ ಅಭಿಮಾನಿ ಬಳಗದ ನೂರಾರು ಮುಖಂಡರುಗಳು, ಸಾವಿರಾರು ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.