ಬೆಂಗಳೂರು, ಜ 23 : ವಿಭಜಕ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಭಾವೈಕ್ಯತೆ ಮೂಡಿಸುವ ಹಾಗೂ ರಾಷ್ಟ್ರಾದ್ಯಂತ ಆಚರಿಸುತ್ತಿರುವ ಶಂಕರ ಜಯಂತಿ ಕಾರ್ಯಕ್ರಮಗಳಿಗೆ ಏಕರೂಪತೆ ತರುವ ಉದ್ದೇಶದಿಂದ ಜ. 25 ಮತ್ತು 26 ರಂದು ಶೃಂಗೇರಿಯಲ್ಲಿ ವೇದಾಂತ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಅಖಿಲ ಭಾರತ ಮಟ್ಟದ ಸಾಧು, ಸಂತರು, ಪೀಠಾಧಿಪತಿಗಳ ಸಮ್ಮೇಳನ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಾಂತ ಭಾರತಿ ಸಂಸ್ಥೆಯ ಟ್ರಸ್ಟಿ ಎಸ್.ಎಸ್. ನಾಗಾನಂದ, ದೇಶದಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸುತ್ತಿದ್ದು, ಈ ಸಂಬಂಧ ಹಲವಾರು ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಕ್ಕೆ ತರಲು ಸಮಿತಿಯೊಂದನ್ನು ರಚಿಸಲಾಗುವುದು. ಶೃಂಗೇರಿ ಮಠದ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಅವರು ಸಮ್ಮೇಳನ ಉದ್ಘಾಟಿಸಲಿದ್ದು, ಕೆ.ಆರ್. ನಗರದ ಯೋಗಾನಂದೇಶ್ವರ ಸರಸ್ವತಿ ಮಠಾಧೀಶರಾದ ಶಂಕರಭಾರತಿ ಸ್ವಾಮೀಜಿ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಸ್ತ ಜೀವಿಗಳ ವಿಷಯವಾಗಿ ಶಂಕರಭಗವತ್ಪಾದರ ಕರುಣೆಗೆ ಪರಿಮಿತಿಯಿಲ್ಲ. ತಮ್ಮ ೩೨ ವರ್ಷಗಳ ಅವಧಿಯಲ್ಲಿ ಅವರ ಸಾಧನೆಗಳು ಅನುಪಮವಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಶಂಕರಜಯಂತಿ ದಿನವನ್ನು ತತ್ತ್ವಜ್ಞಾನಿಗಳ ದಿನವೆಂದು ಆಚರಿಸಲು ನಿರ್ಣಯಿಸಿದ್ದು, ಇಂತಹ ಆಚರಣೆ ರಾಷ್ಟ್ರಮಟ್ಟದಲ್ಲಿ ಆಗಬೇಕಾಗಿದೆ. ಹೀಗಾಗಿ ಈಗಿರುವ ಶಂಕರ ಜಯಂತಿಯ ಎಲ್ಲ ತರಹದ ಸಂಭ್ರಮದ ಆಚರಣೆಗಳ ಜೊತೆಗೆ ಉಪನಿಷತ್ತುಗಳ ಆಳವನ್ನೂ ಸೇರಿಸಿ, ಸನಾತನ ಪರಂಪರೆಯ ಲಾಭಗಳನ್ನು ಜನಸಾಮಾನ್ಯರಿಗೆ ದೊರಕಿಸಿಕೊಡುವ ಆಂದೋಲನ ರೂಪಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದರು.
ಭಾರತಾದ್ಯಂತ ಇರುವ ಎಲ್ಲ ಅದ್ವೈತಪೀಠಾಧಿಪತಿಗಳು, ಅವರ ಪ್ರತಿನಿಧಿಗಳು, ಮಹಾಮಂಡಲೇಶ್ವರರು, ರಾಮಕೃಷ್ಣಾಶ್ರಮ, ಶಾಂಕರಸಿದ್ಧಾಂತವನ್ನೊಪ್ಪುವ ನಾನಾ ಸಂಘಸಂಸ್ಥೆಗಳು, ಸಾಧುಗಳು, ಸಾಧ್ವಿಯವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 25 ರಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಉದ್ಘಾಟನೆಯಾಗಲಿದ್ದು, 26 ರ ಬೆಳಿಗ್ಗೆ ೧೧.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಹಿರಿಯ ವಿದ್ವಾಂಸ ಅನಂತ ಶರ್ಮಾ ಮಾತನಾಡಿ, ಈಗಿನ ಕಾಲ ಘಟ್ಟದಲ್ಲಿ ಸಾಧು ಸಂತರು ಹೇಗಿರಬೇಕು ಎನ್ನುವ ಕುರಿತಂತೆಯೂ ಪ್ರತ್ಯೇಕ ಗೌಪ್ಯ ಸಭೆ ನಡೆಯಲಿದೆ. ಶೃಂಗೇರಿ ಮಠದ ಜಗದ್ಗುರುಗಳು ಸೇರಿದಂತೆ ಗಣ್ಯ ಮಠಾಧೀಶರು ದೇಶದ ಸಾಧು, ಸಂತರಿಗೆ ಸೂಕ್ತ ಸಲಹೆ, ಸೂಚನೆ ನೀಡಲಿದ್ದಾರೆ ಎಂದು ಹೇಳಿದರು.
ನಾವೆಲ್ಲರೂ ಒಂದೇ ಎನ್ನುವ ಶಂಕರರ ತತ್ವಗಳನ್ನು ಇನ್ನಷ್ಟು ಗಟ್ಟಿಗೊಳಿಸುವ, ಅವರ ಏಕಾತ್ಮವಾದವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಚರ್ಚೆ ನಡೆಯಲಿದೆ. ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಅಧಃಪತನದತ್ತ ಸಾಗುತ್ತಿರುವ ಸಮಾಜಕ್ಕೆ ಶಂಕರ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಸಮ್ಮೇಳನ ಪ್ರೇರಕ ಮತ್ತು ಪೂರಕವಾಗದೆ ಎಂದರು.