ರೈತರಿಗೆ ಸಮರ್ಪಕ ವಿದ್ಯುತ್ ನೀಡದೇ ಹೋದಲ್ಲಿ ಉಗ್ರ ಹೋರಾಟ

ರಾಜ್ಯ ಸರಕಾರಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ ಎಚ್ಚರಿಕೆ  

ಅಥಣಿ 16: ಕಾಗವಾಡ ಮತಕ್ಷೇತ್ರದ ರೈತರ ಮನವಿಗೆ ಸ್ಪಂದಿಸಿ ತಕ್ಷಣ ಹಗಲು ಹೊತ್ತಿನಲ್ಲಿ ನಿರಂತರ 7 ಗಂಟೆ ಥ್ರೀ ಫೇಸ್ ವಿದ್ಯುತ್ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ ಎಚ್ಚರಿಕೆ ನೀಡಿದರು.    

ಅವರು ಕಾಗವಾಡ ಪಟ್ಟಣದಲ್ಲಿ  7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಕಾಗವಾಡ ಬಿಜೆಪಿ ಘಟಕ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ ರೈತರು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ  ಗುಂಪು ಏತ ನೀರಾವರಿ ಯೋಜನೆ ಮಾಡಿಕೊಂಡು ನೀರಾವರಿ ಮಾಡಿಕೊಂಡಿದ್ದರು ಆದರೆ ವಿದ್ಯುತ್ ಕೊರತೆಯಿಂದ ಇಂತಹ ಅನೇಕ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ ಎಂದ ಅವರು ಇದರಿಂದ ರೈತರಿಗೆ ಕೋಟ್ಯಾಂತರ ರೂಪಾಯಿ ಹಾನಿಯಾಗುತ್ತಿದೆ ಎಂದರು.  

ಮುಕ್ತಾಯದ ಹಂತದಲ್ಲಿದ್ದ ಖಿಳೇಗಾಂವ ಬಸವೇಶ್ವರ ಯೋಜನೆ ಕಾಮಗಾರಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದು, ಇದೇ ರೀತಿ ಮುಂದುವರೆದಲ್ಲಿ ಈ ಯೋಜನೆ ಅನುಷ್ಠಾನ ಗೊಳ್ಳಲು ಸಾಧ್ಯವೇ ಇಲ್ಲ ಎಂದ ಅವರು ಒಂದು ವೇಳೆ 1 ತಿಂಗಳು ಕಾಲ ನನಗೆ ಅಧಿಕಾರ ಕೊಟ್ಟಲ್ಲಿ ಸರಕಾರಕ್ಕೆ ಸಾಧ್ಯವಾಗದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸುವೆ ಇಲ್ಲದೇ ಹೋದಲ್ಲಿ ರಾಜಕೀಯ ನಿವೃತ್ತಿ ಯಾಗುವೆ ನನ್ನ ಈ ಸವಾಲನ್ನು ಸರಕಾರ ಸ್ವೀಕರಿಸಲಿ ಎಂದರು. 

ಕಾಗವಾಡ ಮತಕ್ಷೇತ್ರದಲ್ಲಿ ನೀರಿನ ಕೊರತೆಯಿಂದ ರೈತರಿಗೆ ಆರ್ಥಿಕ ತೊಂದರೆಯಾಗುತ್ತಿದೆ ಇದರ ಪರಿಣಾಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇತ್ತೀಚಿಗೆ ಸಂಬರಗಿ ಗ್ರಾಮದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ ಇದೇ ರೀತಿ ಮುಂದುವರೆದಲ್ಲಿ ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಉಂಟಾದರೂ ಆಶ್ಚರ್ಯ ಇಲ್ಲ ಎಂದರು.      ನಾಗನೂರ ಪಿ.ಎ.ಗ್ರಾಮದ ಬಸಗೌಡ ಪಾಟೀಲ ನಾತನಾಡಿ, ಚುನಾವಣೆ ಸಮಯದಲ್ಲಿ ನೂರಾರು ಭರವಸೆಗಳನ್ನು ಕೊಟ್ಟು ಆಯ್ಕೆಯಾದ ಶಾಸಕ ರಾಜು ಕಾಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ನಿದ್ದೆಯಲ್ಲಿದ್ದಾರೋ ಅಥವಾ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೋ ಗೊತ್ತಿಲ್ಲ ಒಟ್ಟಿನಲ್ಲಿ ಕಾಗವಾಡದಿಂದ ಕಾಣೆಯಾಗಿದ್ದಾರೆ ಎಂದು ಆರೋಪಿಸಿದರು.   ಮದಭಾವಿ ಬಿಜೆಪಿ ಮುಖಂಡ ಮಹಾದೇವ ಕೋರೆ ಮಾತನಾಡಿ, ಶ್ರೀಮಂತ ಪಾಟೀಲರು ಕಾಗವಾಡ ಕ್ಷೇತ್ರದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಅನುಷ್ಠಾನ ಗೊಳ್ಳದ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ಬು ಅನುಷ್ಠಾನ ಗೊಳಿಸಿದ್ದಾರೆ ಎಂದ ಅವರು ಶ್ರೀಮಂತ ಪಾಟೀಲರು ಅನುಷ್ಠಾನ ಗೊಳಿಸಿರುವ ಕಾಮಗಾರಿಗಳಿಗೆ ಈಗಿನ ಶಾಸಕರು ಪ್ಯಾಚ ವರ್ಕ ಮಾಡುವ ಕೆಲಸ ಮಾಡಲಿ ಎಂದು ಸವಾಲ ಎಸೆದರು. 

ಧುರೀಣರಾದ ದಾದಾ ಪಾಟೀಲ, ಶಿವಾನಂದ ಪಾಟೀಲ, ತಾತ್ಯಂಭಟ್ಟ ಜೋಶಿ, ನಿಂಗಪ್ಪ ಖೋಕಲೆ ಮಾತನಾಡಿದರು.  

ಬಿಜೆಪಿ ಮುಖಂಡರಾದ ಶ್ರೀನಿವಾಸ ಪಾಟೀಲ, ರಾಮಗೌಡ ಪಾಟೀಲ, ದೀಪಕ ಪಾಟೀಲ, ಯೋಗೇಶ್ ಕುಂಬಾರ, ಕುಮಾರ ಅಪರಾಜ, ಅಪ್ಪಾಸಾಹೇಬ ಮಳಮಳಸಿ, ಅರುಣ ಗಣೇಶವಾಡಿ, ಚಿದಾನಂದ ಅಥಣಿ, ಸುರೇಶ ಪಾಟೀಲ, ಆರ್‌.ಎಮ್‌.ಪಾಟೀಲ, ಭಾವುಸಾಹೇಬ ಜಾಧವ, ಆರ್‌.ಎಮ್‌.ಪಾಟೀಲ, ಸಂಬಾಜಿ ವೀರ, ಅಬಾ ಚವ್ಹಾಣ, ವಿಕಿ ಕಾಂಬಳೆ, ಬಾಬಣ್ಣ ಬಿಳ್ಳೂರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.