ಸತ್ತಿಗೇರಿ ಗ್ರಾಮದಲ್ಲಿ ಗ್ರಾಮದೇವತೆಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ

ಯರಗಟ್ಟಿ 13: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಶನಿವಾರದಿಂದ ಒಂಭತ್ತು ದಿನಗಳ ಕಾಲ ಜರುಗಲಿರುವ ಗ್ರಾಮದೇವತೆಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಶನಿವಾರ ನಸುಕಿನ ಜಾವದ ಬ್ರಾಹ್ಮ ಮುಹೂರ್ತದಲ್ಲಿ ಜರುಗಿದ ದೇವಿಯ ವಿವಾಹ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಿಯ ಭಕ್ತರ ದಂಡು ಗ್ರಾಮದಲ್ಲಿ ನೆರೆದಿತ್ತು.ದ್ಯಾಮವ್ವ ಮಾತಾ ಕೀ ಜೈ, ದುರ್ಗಮ್ಮ ದೇವಿ ಕೀ ಜೈ.... ಎಂಬ ಭಕ್ತರ ಉದ್ಘೋಷದೊಡನೆ ದೇವಿಯನ್ನು ತಲೆಯ ಮೇಲೆ ಹೊತ್ತ ದೇವದಾಸಿಯರ ಆವೇಶಭರಿತ ನರ್ತನ , ಡೊಳ್ಳು ಕುಣಿತ, ಚಂಡೆ ವಾದನ, ಪಂಚವಾದ್ಯ, ಸುಹಾಸಿನಿಯರ ಪೂರ್ಣಕುಂಭ ಮೆರವಣಿಗೆ ಮುಂತಾದವು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದವು.ಐದು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವ 9 ದಿನಗಳವರೆಗೆ ನಡೆಯಲಿದೆ.ದೇವಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮದೇವಿ ದೇವಸ್ಥಾನಕ್ಕೆ ಆಗಮಿಸಿದ ಮೇಲೆ ಭಕ್ತರು ದೇವಿಯರನ್ನು ತಲೆಯ ಮೇಲೆ ಹೊತ್ತು ಜಾತ್ರಾ ಗದ್ದುಗೆಗೆ ತೆರಳಿದರು.ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಸಡಗರ ಮನೆಮಾಡಿದೆ.