ರೈತರ ಹೋರಾಟ ಎರಡನೇ ದಿನಕ್ಕೆ; ಭೂ ಅಕ್ರಮ ನೋಂದಣಿ ವಿರುದ್ಧ ಆಕ್ರೋಶ

ರೈತರ ಹೋರಾಟ ಎರಡನೇ ದಿನಕ್ಕೆ; ಭೂ ಅಕ್ರಮ ನೋಂದಣಿ ವಿರುದ್ಧ ಆಕ್ರೋಶ  Farmers' protest enters second day; outrage over illegal land registration


ಬಳ್ಳಾರಿ 20: ಕರ್ನಾಟಕ ಪ್ರಾಂತ ರೈತ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಹೋರಾಟ ಎರಡನೇ ದಿನಕ್ಕೆ ಮುಂದುವರಿದಿದೆ. ರೈತರು ರಾತ್ರಿ ಸ್ಥಳದಲ್ಲೇ ವಾಸ್ತವ್ಯ ಹೂಡಿ ಪ್ರತಿಭಟನೆ ನಡೆಸಿದರು.  

ಹೋರಾಟಕ್ಕೆ ಬೆಂಬಲ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಸಿರುಗುಪ್ಪ ತಾಲ್ಲೂಕಿನ ಹಳೆಕೋಟೆ, ದೇವಲಾಪುರ, ಮಂಜಿನಾಳ, ನಡವಿ, ತೆಕ್ಕಲಕೋಟೆ ಹಾಗೂ ಸಿರಿಗೇರಿ ಗ್ರಾಮಗಳ ರೈತರ ಜಮೀನುಗಳನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ಪಟ್ಟಾ ಮಾಡಿಸಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.  

ಮೂಲ ಪಟ್ಟಾದಾರರು ಇಲ್ಲದಂತೆ ದಾಖಲೆಗಳನ್ನು ಸೃಷ್ಟಿಸಿ, 300ಕ್ಕೂ ಅಧಿಕ ಎಕರೆ ಜಮೀನನ್ನು ಸಂಬಂಧಿಕರು ಹಾಗೂ ಇತರರ ಹೆಸರಿಗೆ ನೋಂದಣಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಭೂಗಳ್ಳರನ್ನು ಬಂಧಿಸಬೇಕು ಹಾಗೂ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.  

ಭೂ ವಿವಾದಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು ಎಂಬ ಸರ್ಕಾರದ ಸ್ಪಷ್ಟ ಆದೇಶವಿದ್ದರೂ, ದೂರು ನೀಡಿದ ತಕ್ಷಣ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮೇಲೆ ಹಾಗೂ ರೈತ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ತಕ್ಷಣ ಹಿಂಪಡೆಯಬೇಕು. ಉಳುವ ರೈತರಿಗೆ ಫಾರಂ-1 ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.  

ಈ ಪ್ರಕರಣಕ್ಕೆ ಪ್ರಮುಖ ಕಾರಣಕರ್ತರೆಂದು ಆರೋಪಿಸಿರುವ ಸಿರುಗುಪ್ಪ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಯಲ್ಲಾ ರೆಡ್ಡಪ್ಪ ಅವರನ್ನು ಕೂಡಲೇ ಎಸ್ಸಿ-ಎಸ್ಟಿ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದ ರೈತ ಮುಖಂಡರು, ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.  ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೃಷಿ ಕಾರ್ಮಿಕರು ಹಾಗೂ ರೈತರಿಗೆ ಸ್ಥಳದಲ್ಲೇ ಅಡುಗೆ ಮಾಡಿ ಊಟದ ವ್ಯವಸ್ಥೆ ಮಾಡಲಾಗಿತ್ತು.