ಬೆಳಗಾವಿ

ಶ್ರಾವಣದಲ್ಲಿ ಭಕ್ತಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ: ವಸಂತಗೀತಾ ಹೀರೆಮಠ

ಶ್ರಾವಣದಲ್ಲಿ ಭಕ್ತಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ: ವಸಂತಗೀತಾ ಹೀರೆಮಠ

ಲೋಕದರ್ಶನ ವರದಿ 

ಬೆಳಗಾವಿ 26 : ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನವಿದ್ದು, ಭಕ್ತಿ, ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಈ ಮಾಸವು ಪವಿತ್ರವಾಗಿದೆ. ಶ್ರಾವಣ ಮಾಸದಲ್ಲಿ ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವುದರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಪ್ರಾಂಶುಪಾಲರಾದ ವಸಂತಗೀತಾ ಹೀರೆಮಠ ಹೇಳಿದರು.  ನಗರದ ಶಿವಬಸವ ಲಿಂಗಾಯತ ಭವನದಲ್ಲಿ ಬುಧವಾರ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಿದ್ದ ಬಂತುಹಿಶ್ರಾವಣ ಅರಿಶಿಣಹಿಕುಂಕುಮ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವರಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಮಳೆ-ಬೆಳೆ ಸಮೃದ್ಧಿಯಾಗಲು ಪ್ರಕೃತಿ ಹಾಗೂ ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜೊತೆಗೆ ಜೀವನದಲ್ಲಿ ಸಕಲ ಒಳಿತನ್ನು ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಭಕ್ತಿಯಿಂದ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.   

ಶ್ರಾವಣ ಮಾಸದ ಅಂಗವಾಗಿ ಮಹಿಳೆಯರಿಗಾಗಿ ಅರಿಶಿಣಹಿಕುಂಕುಮ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸುವುದು ನಮ್ಮ ಸಂಸ್ಕೃತಿಯ ಪರಂಪರೆಯನ್ನು ಉಳಿಸುವ ಕಾರ್ಯವಾಗಿದೆ. ಮಹಿಳೆಯರು ಪರಸ್ಪರ ಅರಿಶಿಣಹಿಕುಂಕುಮ ವಿನಿಮಯ ಮಾಡಿಕೊಂಡು ಉಡಿ ತುಂಬುವ ಮೂಲಕ ಸೌಭಾಗ್ಯವನ್ನು ಕೋರಬೇಕು. ಇದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿದೆ ಎಂದರು. 

ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಅಖಿಲ ಭಾರತ ವೀರಶೈವ ಮಹಾಸಭೆ ನಿರ್ಮಿತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಕ್ಕೆ ?6 ಲಕ್ಷ ದಾಸೋಹ ಸೇವೆಯಾಗಿ ದೇಣಿಗೆ ನೀಡಲಾಯಿತು. ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀದೇವಿ ಅಂಟಿನ, ಅಧ್ಯಕ್ಷೆ ರಾಜೇಶ್ವರಿ ಕಲೂತಿ, ಸಹ ಕಾರ್ಯದರ್ಶಿ ಲಕ್ಷ್ಮೀ ಸಾನಿಕೊಪ್ಪ ಹಾಗೂ ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ