ಚುನಾವಣಾ ಸಂಬಂಧಿತ ಅನುಮತಿಗಳು “ಸುವಿಧಾ” ಮೂಲಕ ಸುಲಭವಾಗಿ ಲಭ್ಯ

ಕಾರವಾರ 27: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ  ಸಂಬಂಧಿಸಿದಂತೆ , ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು,  ಈ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವಿಧ ರಾಜಕಿಯ ಪಕ್ಷಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ತಮ್ಮ ಚುನಾವಣಾ ಪ್ರಚಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲು ಸಂಬಂದಪಟ್ಟ ಅಧಿಕಾರಿಗಳಿಂದ ಸೂಕ್ತ ಪೂರ್ವಾನುಮತಿ ಪಡೆಯುವುದು ಅಗತ್ಯವಿದೆ. ಈ ರೀತಿಯ ವಿವಿಧ ಅನುಮತಿಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ ಚುನಾವಣಾ ಆಯೋಗವು “ಸುವಿಧಾ” ಎಂಬ ಆಪ್ ಅಭಿವೃದ್ದಿಪಡಿಸಿದ್ದು, ಇದನ್ನು ಬಳಸುವ  ಮೂಲಕ ಸುಲಭ ರೀತಿಯಲ್ಲಿ  ಚುನಾವಣಾ ಸಂಬಂಧಿತ ವಿವಿಧ ಚಟುವಟಿಕೆಗಳಿಗೆ ಅನುಮತಿ ಪಡೆಯಬಹುದಾಗಿದೆ. 

ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು  ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಸುವಿಧಾ ಆಪ್ ಇನ್‌ಸ್ಟಾಲ್ ಮಾಡಿಕೊಂಡು ವಿವಿಧ ಅನುಮತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅತ್ಯಂತ ಸರಳವಾಗಿ ಬಳಸುವಂತೆ ಈ ಆಪ್ ನ್ನು ರೂಪಿಸಲಾಗಿದೆ. 

ಸುವಿಧಾ ಆಪ್ ಮೂಲಕ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು  , ಮನೆ ಮನೆ ಪ್ರಚಾರ ಮಾಡಲು, ತಮ್ಮ ಪರವಾಗಿ ಪ್ರಚಾರ ಮಾಡಲು ಆಗಮಿಸುವ ಸ್ಟಾರ್ ಪ್ರಚಾರಕರ  ಹೆಲಿಕ್ಯಾಪ್ಟರ್ ಮತ್ತು ಹೆಲಿ ಪ್ಯಾಡ್ ಬಳಕೆಗೆ, ಧ್ವನಿವರ್ಧಕ ಬಳಕೆಗೆ, ಪಕ್ಷದ ತಾತ್ಕಾಲಿಕ ಕಚೇರಿ ತೆರೆಯಲು, ಪ್ರಚಾರದ ಕರಪತ್ರಗಳನ್ನು ವಿತರಿಸಲು, ಪ್ರಚಾರದ ವೀಡಿಯೋ ವ್ಯಾನ್ ಗಳ ಬಳಕೆಗೆ,  ಧ್ವನಿವರ್ಧಕ ಬಳಕೆಯೊಂದಿಗೆ ಪ್ರಚಾರ ಸಭೆಗಳನ್ನು ಆಯೋಜಿಸಲು, ಧ್ವನಿವರ್ಧಕ ಬಳಕೆ ಮಾಡದೇ  ಪ್ರಚಾರ ಸಭೆಗಳನ್ನು ಆಯೋಜಿಸಲು, ಮೆರವಣಿಗೆಯನ್ನು ಆಯೋಜಿಸಲು, ರಾ​‍್ಯಲಿ ಗಳನ್ನು  ಆಯೋಜಿಸಲು, ಪ್ರಚಾರದ ಕುರಿತು ಬ್ಯಾನರ್ ಮತ್ತು ಬಾವುಟಗಳ ಬಳಕೆಗೆ, ವಾಹನಗಳನ್ನು ಬಳಸಿಕೊಳ್ಳಲು, ತಮ್ಮ ಪ್ರಚಾರ ವಾಹನಗಳಿಗೆ ಧ್ವನಿವರ್ಧಕ ಅಳವಡಿಸಿಕೊಳ್ಳಲು, ತಮ್ಮ ಮತ ಕ್ಷೇತ್ರದ ಒಳಗೆ ಮತ್ತು ಹೊರಗೆ ವಾಹನಗಳನ್ನು ಬಳಕೆ ಮಾಡಲು , ಏರ್ ಬಲೂನ್ ಗಳ ಮೂಲಕ ಪ್ರಚಾರ ಅನುಮತಿಗಳನ್ನು ಪಡೆಯಲು ಸುವಿಧಾ ಆಪ್ ಬಳಸಿಕೊಳ್ಳಬಹುದಾಗಿದೆ. 

ಈ ಆಪ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳು ಸಂಬಂದಪಟ್ಟ ಚುನಾವಣಾ ಕ್ಷೇತ್ರದ ಜಿಲ್ಲಾ ಚುನಾವಣಾಧಿಕಾರಿ , ಸಹಾಯಕ ಚುನಾವಣಾಧಿಕಾರಿಗಳಿಗೆ ಸ್ವೀಕೃತವಾಗಲಿದ್ದು, ಅಲ್ಲಿ ಅರ್ಜಿಗಳ ಪರೀಶೀಲನೆ ನಡೆಯಲಿದ್ದು, ನಂತರದಲ್ಲಿ ಅಗತ್ಯ ಅನುಮತಿಗಳನ್ನು ನೀಡಲಾಗುತ್ತದೆ. 

ಸುವಿಧಾ ಆಪ್ ಮೂಲಕ ಇದುವರೆಗೆ ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 20, ಹಳಿಯಾಳದಲ್ಲಿ 9, ಕಾರವಾರದಲ್ಲಿ 42, ಖಾನಾಪುರದಲ್ಲಿ 33,ಕಿತ್ತೂರು ನಲ್ಲಿ 14, ಕುಮಟಾದಲ್ಲಿ 18,  ಶಿರಸಿ ಯಲ್ಲಿ 35,  ಯಲ್ಲಾಪುರದಲ್ಲಿ 26 ಸೇರಿದಂತೆ  ಒಟ್ಟು 197 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 16 ಅರ್ಜಿಗಳು ತಿರಸ್ಕೃತಗೊಂಡಿದ್ದು 176 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಭಾರತೀಯ ಜನತಾ ಪಾರ್ಟಿಯಿಂದ 82, ಪಕ್ಷೇತರರಿಂದ 5 , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ 105, ಜನತಾದಳ (ಜಾತ್ಯಾತಿತ) ದಿಂದ 3 ಹಾಗೂ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌ ) ಪಕ್ಷದ ವತಿಯಿಂದ 2 ಅರ್ಜಿಗಳು ಸುವಿಧಾ ಆಪ್ ಮೂಲಕ ಸಲ್ಲಿಕೆಯಾಗಿವೆ.