ಈದ್ ಮಿಲಾದ್ ಆಚರಣೆ: ಶಾಂತಿ ಕಾಪಾಡಲು ಪೊಲೀಸ್ ಮನವಿ
ಬ್ಯಾಡಗಿ, ಆ.21: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪೊಲೀಸ್ ನೀರೀಕ್ಷಕ ಎಂ.ಬಿ. ಚಿಕ್ಕಣ್ಣನವರ್ ಮನವಿ ಮಾಡಿದರು.
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಆಚರಿಸುವಂತೆ ಕೋರಿದರು. ಮೆರವಣಿಗೆ ಮಾರ್ಗ, ಧ್ವನಿವರ್ಧಕ ಬಳಕೆ ಹಾಗೂ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಎಲ್ಲ ಸಮುದಾಯದವರು ಪರಸ್ಪರ ಗೌರವ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಸಂದೇಶಗಳು ಅಥವಾ ಚಿತ್ರಗಳನ್ನು ಹಂಚಿಕೊಳ್ಳಬಾರದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಘಟನೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಯುವಕರು ವಾಹನಗಳಲ್ಲಿ ಕರ್ಕಶ ಶಬ್ದ ಮಾಡುವುದನ್ನು ತಪ್ಪಿಸಬೇಕು ಹಾಗೂ ರಸ್ತೆ ಬದಿಯ ಅಲಂಕಾರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಎಚ್., ರೈತ ಮುಖಂಡ ಗಂಗಣ್ಣ ಎಲ್., ಸುರೇಶ್ ಆಸಾದಿ, ಡಾ. ಎ.ಎಂ. ಸೌಧಾಗರ್, ಮುಕ್ತಿಯಾರ್ ಮುಲ್ಲಾ, ಮನ್ಸೂರ್ ಹಕೀಂ, ಸೋಮಣ್ಣ ಮಾಳಗಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಹಬ್ಬದ ಆಯೋಜಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.