ಎಲ್ಲರೂ ಶಿಕ್ಷಣ ಪಡೆದು ಒಳ್ಳೆಯ ಜೀವನ ರೂಪಿಸಿಕೊಳ್ಳಿ: ಹಳೇಮನಿ

ರಾಯಬಾಗ 14: ಡಾ.ಬಿ.ಆರ್‌.ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ಹಕ್ಕು ನೀಡಿದ್ದು, ಎಲ್ಲರೂ ಶಿಕ್ಷಣ ಪಡೆಯುವುದರ ಮೂಲಕ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಬೆಳಗಾವಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಮೋದ ಹಳೇಮನಿ ಹೇಳಿದರು. 

ರವಿವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ತಾ.ಪಂ., ಪ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ರವರ 133ನೇ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾವಂತರಾದ ನಾವು ನಮ್ಮ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಅಂಬೇಡ್ಕರ್‌ರವರ ಆದರ್ಶಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ನಾವು ಮಾದರಿಯಾಗಬೇಕಿದೆ ಎಂದರು.  

ಸಂವಿಧಾನದಲ್ಲಿ ಮಹಿಳೆಯರಿಗೆ ಅನೇಕ ಹಕ್ಕಗಳನ್ನು ಅಂಬೇಡ್ಕರ್‌ರವರು ನೀಡಿದ್ದು, ಅದನ್ನು ಮಹಿಳೆಯರು ಅರಿತುಕೊಳ್ಳಬೇಕು. ಹಿಂದೂ ಮಹಿಳೆಯರಿಗೆ ಆಸ್ತಿಯಲ್ಲಿ ಸಮ ಪಾಲು ದೊರಕಿಸಿಕೊಡಲು ಹಿಂದೂ ಕೋಡ್ ಬಿಲ್ ಮಂಡಿಸಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್‌ರವರಾಗಿದ್ದಾರೆ. ಆದರೆ ಅಂದು ಸಂಸತ್ತಿನಲ್ಲಿ ಇವರು ಮಂಡಿಸಿದ ಬಿಲ್ ಬಿದ್ದು ಹೋಗಿದ್ದರಿಂದ ತಕ್ಷಣದಲ್ಲಿಯೇ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದು ತಮ್ಮ ದಿಟ್ಟತನವನ್ನು ಮೆರೆದಿದ್ದಾರೆಂದರು.  

ತಹಶೀಲ್ದಾರ ಪ್ರಶಾಂತ ಚನಗೊಂಡ, ತಾ.ಪಂ.ಇಒ ಆನಂದಕುಮಾರ ಬಾಳಪ್ಪನ್ನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್‌.ಚಂದರಗಿ, ಸಿಪಿಐ ಅರುಣಕುಮಾರ, ಬಿಇಒ ಬಸವರಾಜಪ್ಪ ಆರ್, ಟಿಎಚ್‌ಒ ಡಾ.ಎಸ್‌.ಎಮ್‌.ಪಾಟೀಲ, ಗ್ರೇಡ್‌-2 ತಹಶೀಲ್ದಾರ ಪರಮಾನಂದ ಮಂಗಸೂಳಿ, ಸ.ನೌ.ಸಂಘದ ತಾಲೂಕಾಧ್ಯಕ್ಷ ವಿಶ್ವನಾಥ ಹಾರೂಗೇರಿ, ಆರ್‌ಎಫ್‌ಒ ಸಂತೋಷ ಸುಂಬಳಿ, ಸುಭಾಷ ವಲ್ಯಾಪೂರ, ಡಾ.ಅರುಣ ಕಾಂಬಳೆ, ಪಿಎಸ್‌ಐ ಐಶ್ವರ್ಯ ನಾಗರಾಳ, ವಿ.ಬಿ.ಅರಗೆ ಸೇರಿದಂತೆ ಅನೇಕರು ಇದ್ದರು.