ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿದ ಡಾ.ವಿ.ಕೃ.ಗೋಕಾಕ್ -ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ

ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿದ ಡಾ.ವಿ.ಕೃ.ಗೋಕಾಕ್ -ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ Dr.V.K.Gokak who gave new strength to Kannada language -Chancellor Dr.Suresha Jangamashetti

ಲೋಕದರ್ಶನ ವರದಿ 

         ಹಾವೇರಿ 22 : ಕ್ಷೀಣವಾಗುತ್ತಿದ್ದ ಕನ್ನಡಕ್ಕೆ ಹೊಸ ಶಕ್ತಿ ತುಂಬಿದ್ದು ಡಾ.ವಿ.ಕೃ.ಗೋಕಾಕ್‌ರ ಗೋಕಾಕ್ ವರದಿ ಆಧಾರಿತ ಗೋಕಾಕ್ ಚಳವಳಿ ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು. 

ಕೆರೆಮತ್ತಿಹಳ್ಳಿ ಹಾವೇರಿ ವಿಶ್ವವಿದ್ಯಾಯದಲ್ಲಿ  ಗುರುವಾರ ಡಾ. ವಿ.ಕೃ.ಗೋಕಾಕ್‌ರಾಷ್ಟ್ರೀಯ ಸ್ಮಾರಕ ಟ್ರಸ್ಟ ಮತ್ತು ಹಾವೇರಿ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾದ ಡಾ. ವಿ.ಕೃ.ಗೋಕಾಕ್‌ರ ಕಾವ್ಯದ ನೆಲೆಗಳು ಎಂಬ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  

ಸ್ಥಳೀಯ ಮತ್ತು ರಾಜ್ಯ ಮಟ್ಟದ ಹಲವು ಸಮಸ್ಯೆಗಳ ಮೇಲೆ ಇಂದು ರಕ್ಷಣಾ ವೇದಿಕೆಗಳು ಹೋರಾಟ ಮಾಡುತ್ತಿವೆ. ಇದಕ್ಕೆ ಮೂಲ ಕಾರಣ ಡಾ.ವಿ.ಕೃ.ಗೋಕಾಕ್‌ರು ಕೊಟ್ಟ ಕನ್ನಡದ ಶಕ್ತಿ. ಅವರ ಸಾಧನೆಯ ಹಿಂದೆದೊಡ್ಡ ಪಯಣವಿದೆ. ಅವರ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನವಾಗಬೇಕು ಎಂದರು. 

ಅಧ್ಯಕ್ಷತೆ ಟ್ರಸ್ಟಿನ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ ಮಾತನಾಡಿ,  ನವ್ಯಕಾವ್ಯದ ಪ್ರವರ್ತಕರಾದ ಡಾ.ವಿ.ಕೃ.ಗೋಕಾಕ್‌ರು ಕನ್ನಡ ನವ್ಯಕಾವ್ಯ ಮುಖೇನ ಜೀವ ಕಳೆ ತಂದವರು. ಮುಂಬರುವ ದಿನಗಳಲ್ಲಿ ಅವರ ಸಮಗ್ರ ಸಾಹಿತ್ಯದ ಅಧ್ಯಯನ ಮೂಲಕ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಟ್ರಸ್ಟ್‌ ಮಾಡಲಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗೋಕಾಕ್‌ರ ಕಾವ್ಯದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಎರಡು ಉಪನ್ಯಾಸಗಳು ಜರುಗಿದವು. ಕನ್ನಡ ಅಧ್ಯಯನ ವಿಭಾಗದ ಡಾ. ಪ್ರವೀಣ ಎಚ್, ‘ನವ್ಯಕಾವ್ಯ ಪರಂಪರೆ: ಭಾಷಿಕ ಮೀಮಾಂಸೆ’ ಎಂಬ ವಿಷಯದ ಮೇಲೆ ಮಾತನಾಡಿ, ತಮ್ಮ ಆಧುನಿಕ ಚಿಂತನೆಗಳ ಮೂಲಕ ನವ್ಯಕಾವ್ಯಕ್ಕೆ ಪ್ರವೇಶಿಕೆ ಬರೆದಗೋಕಾಕ್‌ರು ಭಾಷೆ ಮತ್ತು ಭಿನ್ನ ವಸ್ತುಗಳನ್ನು ಕಾವ್ಯಕ್ಕೆತಂದು ಹಳೆಯದರಿಂದ ಬಿಡುಗಡೆಗೊಳಿಸಿದ ಕೀರ್ತಿ ಅವರದು. ಅವರ ಭಾಷಿಕ ಮೀಮಾಂಸೆ ಈಗಲೂ ಪ್ರಸ್ತುತ ಎಂದು ಹೇಳುದರು.  

‘ಗೋಕಾಕ್‌ರ ಕಾವ್ಯ ಮತ್ತು ಪುರಾಣ ಅನುಸಂಧಾನ’ ಎಂಬ ವಿಷಯದ ಮೇಲೆ ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ಪುರಾನವನ್ನು ನಿರಾಕರಿಸದೆ, ವಿಶ್ವಾಮಿತ್ರನನ್ನು ಸರ್ವಕಾಲಿಕವಾಗಿ ಪ್ರಸ್ತುತವೆನಿಸುವಂತೆ ಕಟ್ಟಿಕೊಟ್ಟವರು ಗೋಕಾಕ್‌ರು. ನಭೋ ಮಂಡಲದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ವಿ.ಕೃ.ಗೋಕಾಕ್‌ರು ಲೋಕದ ವಿಮರ್ಶೆ ಮಾಡಿದ ದೊಡ್ಡ ಕವಿ ಎಂದು ಹೇಳಿ ಅವರ ಊರ್ಣನಾಭ, ಭಾರತ ಸಿಂಧುರಶ್ಮಿ ಮುಂತಾದ ಕಾವ್ಯಗಳ ಉದಾಹರಣೆ ಕುರಿತು ಮಾತನಾಡಿದರು. 

ನಂತರ ನಡೆದ ಸಂವಾದದಲ್ಲಿ ಡಾ.ಚಿದಾನಂದ ಕಮ್ಮಾರ, ಚೈತ್ರಾ ಹುಳುಕೆಲ್ಲಪ್ಪನವರ, ಡಾ. ಪುಟ್ಟಸ್ವಾಮಿ, ಡಾ.ರೇಖಾ ಬಿ. ಬಾಳೋಜಿ, ಪ್ರೊ.ಕಿರಣ ಕೆ, ಮುಂತಾದವರು ಪಾಲ್ಗೊಂಡಿದ್ದರು. 

ಮೌಲ್ಯಮಾಪನ ಕುಲಸಚಿವರಾದ ಪ್ರೊ.ರೇಣುಕಾ ಮೇಟಿ, ಟ್ರಸ್ಟಿನ ಸದಸ್ಯರುಗಳಾದ ಪ್ರೊ.ಮಾರುತಿ ಶಿಡ್ಲಾಪೂರ, ಗುರುರಾಜ ನಾಡಿಗೇರ, ಡಾ.ಪುಷ್ಟಾವತಿ ಶಲವಡಿಮಠ, ಮಾಲತೇಶ ಅಂಗೂರ ಇತರರು ಉಪಸ್ಥಿತರಿದ್ದರು. ರಂಜಿತಾ ಗುಳೇದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ತನುಜಾ ಹಂಚಿನಮನಿ ಸ್ವಾಗತಿಸಿದರು. ವಾಣಿ ಅಗಡಿ ಕಾರ್ಯಕ್ರಮ ನಿರೂಪಿಸಿದರು, ಪುಟ್ಟಸ್ವಾಮಿ ವಂದಿಸಿದರು.