ಹಿರಿಯ ನಾಗರಿಕರ ಮನೆ ಬಾಗಿಲಿಗೆ ಮತದಾನ ತಂಡ: ಮುಂಡರಗಿ

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮತದಾನ ಜಾಗೃತಿ 

ವಿಜಯಪುರ, ಏ.27: 85 ವರ್ಷ  ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗವು ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಮಹತ್ತರ ಅವಕಾಶವನ್ನು ಕಲ್ಪಿಸಿದೆ. ಆದ್ದರಿಂದ ತಾವುಗಳು ಯಾವುದೇ ತೊಂದರೆಗೊಳಗಾಗದೇ ಮನೆಯಲ್ಲಿಯೇ ಇದ್ದು ಮತದಾನ ಮಾಡಬಹುದು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್‌. ಮುಂಡರಗಿ ಹೇಳಿದರು. 

ಅವರು ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ ವತಿಯಿಂದ ಶುಕ್ರವಾರ ವಿಜಯಪುರ ನಗರದ ಗ್ಯಾಂಗ್ ಬಾವಡಿ ಹಾಗೂ ಎಪಿಎಂಸಿ ಹತ್ತಿರ ಅಕ್ಕಮಹಾದೇವಿ ರೋಡ್ ವ್ಯಾಪ್ತಿಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡುವಂತೆ ಮನವಿ ಮಾಡಿ, ಮನೆಗಳ ಗೋಡೆಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಮತದಾನ ಕುರಿತು ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.  

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಮನೆಯ ಬಾಗಿಲಿಗೆ ಅಧಿಕಾರಿಗಳ ತಂಡವು ಮತದಾನ ಪ್ರಕ್ರಿಯೆ ನಡೆಸಲು ಬರಲಿದ್ದಾರೆ. ಈ ಮತದಾನ ಪ್ರಕ್ರಿಯೆಯು ಏ.27ರಿಂದ ಏ.29ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಆದ್ದರಿಂದ ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಬೇಕು ಎಂದು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಲ್ಲಿ ವಿನಂತಿಸಿದರು. 

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು ಮತ್ತು ಪ್ರತಿ ಮನೆ ಮನೆಗೂ ಮತದಾನದ ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಅಂಟಿಸಲಾಯಿತು.  

ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ರಾಜಶೇಖರ ದೈವಾಡಿ, ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಎ ಬಿ ಅಲ್ಲಾಪೂರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಪಂಚಾಯತಿಯ ಸಿಬ್ಬಂದಿ ಉಪಸ್ಥಿತರಿದ್ದರು.