ಮದುರೈನಲ್ಲಿ ದೈವಿಕ ಮುಂಜಾನೆ: ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಮಹಾ ಕುಂಭಾಭಿಷೇಕಕ್ಕೆ ಲಕ್ಷಾಂತರ ಭಕ್ತರ ಸಾಕ್ಷಿ
Divine Dawn in Madurai as Lakhs Witness Meenakshi Sundareswarar Temple Consecration
ಮದುರೈ, ಸೆಪ್ಟೆಂಬರ್ 17 : ಐತಿಹಾಸಿಕ ಅರುಳ್ಮಿಗು ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಮಹಾ ಕುಂಭಾಭಿಷೇಕಕ್ಕೆ ಬುಧವಾರ ಮದುರೈ ಸಾಕ್ಷಿಯಾಯಿತು. 17 ವರ್ಷಗಳ ಬಳಿಕ ನಡೆದ ವಿಶ್ವಪ್ರಸಿದ್ಧ ದೇವಾಲಯದ ಈ ಪುನರ್‌ಪ್ರತಿಷ್ಠಾ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಮಹಾ ಕುಂಭಾಭಿಷೇಕದ ಹಿನ್ನೆಲೆಯಲ್ಲಿ ಮದುರೈ ದೇವಾಲಯ ನಗರಿ ಹಬ್ಬದ ವಾತಾವರಣದಿಂದ ಕಂಗೊಳಿಸಿತು. ಐತಿಹಾಸಿಕ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಿ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಕುಂಭಾಭಿಷೇಕದ ಅಂಗವಾಗಿ ಪವಿತ್ರ ಜಲದಿಂದ ತುಂಬಿದ ಕಲಶಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳು ಹಾಗೂ ವೇದಘೋಷಗಳ ನಡುವೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಮೊದಲಿಗೆ ದೇವಿ ಮೀನಾಕ್ಷಿ ಹಾಗೂ ಸ್ವಾಮಿ ಸುಂದರೇಶ್ವರರ ಚಿನ್ನದ ವಿಮಾನಗಳಿಗೆ ಪವಿತ್ರ ಜಲವನ್ನು ಅಭಿಷೇಕ ಮಾಡಲಾಯಿತು. ಬಳಿಕ ದೇವಾಲಯದ ರಾಜಗೋಪುರಗಳಿಗೂ ಪವಿತ್ರ ಜಲದಿಂದ ಕುಂಭಾಭಿಷೇಕ ನೆರವೇರಿಸಲಾಯಿತು.
ಸೆಪ್ಟೆಂಬರ್ 6ರಿಂದ ಆರಂಭಗೊಂಡಿದ್ದ ವಿವಿಧ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳ ಬಳಿಕ ಮಹಾ ಕುಂಭಾಭಿಷೇಕ ನೆರವೇರಿತು. ದೇವಾಲಯದ ಆವರಣದಲ್ಲಿ ವಿಶೇಷ ಯಾಗಶಾಲಾ ಪೂಜೆಗಳನ್ನು ಆಯೋಜಿಸಲಾಗಿದ್ದು, 184 ಯಾಗಕುಂಡಗಳು ಹಾಗೂ 56 ಯಾಗಶಾಲೆಗಳನ್ನು ನಿರ್ಮಿಸಲಾಗಿತ್ತು.
ಕಾಶಿಯ ಗಂಗಾ ಸೇರಿದಂತೆ ದೇಶದ ಏಳು ಪವಿತ್ರ ನದಿಗಳಿಂದ ತರಲಾದ ಪವಿತ್ರ ಜಲವನ್ನು ಕುಂಭಾಭಿಷೇಕದ ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಸಲಾಯಿತು. ಮುಖ್ಯ ಸಮಾರಂಭಕ್ಕೂ ಮುನ್ನ ಅರ್ಚಕರು ಸರಣಿ ಪೂಜೆಗಳು ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಮಾರಂಭವನ್ನು ಕಣ್ತುಂಬಿಕೊಂಡರು.
ಲಕ್ಷಾಂತರ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಮದುರೈ ನಗರದಾದ್ಯಂತ ವ್ಯಾಪಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಭದ್ರತೆ, ಜನಸಂದಣಿ ನಿಯಂತ್ರಣ ಹಾಗೂ ಸಂಚಾರ ನಿರ್ವಹಣೆಗಾಗಿ ಸುಮಾರು 6,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭಕ್ತರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಹಾಗೂ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ನಗರದ ಪ್ರಮುಖ ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಮತ್ತು ಮುಖ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಮಹಾ ಕುಂಭಾಭಿಷೇಕ ಸಮಾರಂಭವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಡಳಿತ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೇವೆಗಳು, ವಾಹನ ನಿಲುಗಡೆ ವ್ಯವಸ್ಥೆ, ವೈದ್ಯಕೀಯ ಶಿಬಿರಗಳು, ಕುಡಿಯುವ ನೀರಿನ ಕೇಂದ್ರಗಳು ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದವು.
ವ್ಯಾಪಕ ವ್ಯವಸ್ಥೆಗಳ ಭಾಗವಾಗಿ 21 ಸ್ಥಳಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಾಹಾರದಲ್ಲಿ ಪೊಂಗಲ್, ಇಡ್ಲಿ, ಮೆದು ವಡೆ ಹಾಗೂ ರವಾ ಕೇಸರಿಯನ್ನು ನೀಡಲಾಗಿತ್ತು. ಮಧ್ಯಾಹ್ನದ ಊಟದಲ್ಲಿ ಸಾಂಬಾರ್ ಅನ್ನ, ತರಕಾರಿ ಅನ್ನ, ಟೊಮೆಟೊ ಅನ್ನ ಹಾಗೂ ಮೊಸರನ್ನವನ್ನು ವಿತರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 