ಜಿಲ್ಲಾ ಕ್ರೀಡಾಂಗಣ ಕಾಮಗಾರಿ: ಲೋಕಾಯುಕ್ತ ತನಿಖೆಗೆ ಅನಿಲ ಮೆಣಸಿನಕಾಯಿ ಆಗ್ರಹ

ಜಿಲ್ಲಾ ಕ್ರೀಡಾಂಗಣ ಕಾಮಗಾರಿ: ಲೋಕಾಯುಕ್ತ ತನಿಖೆಗೆ ಅನಿಲ ಮೆಣಸಿನಕಾಯಿ ಆಗ್ರಹ  District Stadium Construction: Anil Menasinakai Demands Lokayukta Probe

ಜಿಲ್ಲಾ ಕ್ರೀಡಾಂಗಣ ಕಾಮಗಾರಿ: ಲೋಕಾಯುಕ್ತ ತನಿಖೆಗೆ ಅನಿಲ ಮೆಣಸಿನಕಾಯಿ ಆಗ್ರಹ  

ಗದಗ  13:  ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ​‍್ಕ ತಾಂತ್ರಿಕ ಪರೀಶೀಲನೆ, ಸಾರ್ವಜನಿಕ ಸಮಾಲೋಚನೆ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಅಭಿಪ್ರಾಯ ಪಡೆಯದೆ ಫುಟ್‌ಬಾಲ್‌ಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.  ಜಿಲ್ಲಾ ಕ್ರೀಡಾಂಗಣವು ಜಿಲ್ಲೆಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುಉಪಯೋಗಿ ಆಸ್ತಿಯಾಗಿದ್ದು, ಇಲ್ಲಿ ಕ್ರಿಕೆಟ್, ಅಥ್ಲೆಟಿಕ್ಸ್‌, ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಹಾಗೂ ಆಗಸ್ಟ್‌ 15, ಜನವರಿ 26 ಮತ್ತು ನವೆಂಬರ್ 1ರ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತವೆ. ಉದ್ದೇಶಿತ ಕಾಮಗಾರಿಯಿಂದ ಕ್ರೀಡಾಂಗಣದ ಮೂಲಸ್ವರೂಪ ಮತ್ತು ಇತರ ಚಟುವಟಿಕೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.  ಕಾಮಗಾರಿ ಆರಂಭಕ್ಕೂ ಮುನ್ನ ಮಣ್ಣು, ನೀರು ಹರಿವು ಹಾಗೂ ಕ್ರೀಡಾಂಗಣದ ಸಾಮರ್ಥ್ಯದ ವೈಜ್ಞಾನಿಕ ಪರೀಕ್ಷೆ ನಡೆಸಲಾಗಿದೆಯೇ, ತಜ್ಞರಿಂದ ತಾಂತ್ರಿಕ ವರದಿ ಪಡೆಯಲಾಗಿದೆಯೇ, ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆಯೇ ಮತ್ತು ಕಾಮಗಾರಿಯ ಅಂದಾಜು ವೆಚ್ಚ, ಗುತ್ತಿಗೆದಾರರ ವಿವರ ಹಾಗೂ ಹಣದ ಮೂಲವನ್ನು ಬಹಿರಂಗಪಡಿಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.  ತಾಂತ್ರಿಕ ಪರೀಶೀಲನೆಯಿಲ್ಲದೆ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಾಧ್ಯತೆಯ ಬಗ್ಗೆ ಅನುಮಾನ ಮೂಡಿದೆ. ಆದ್ದರಿಂದ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿ, ಯೋಜನೆಯ ಅನುಮೋದನೆ, ಅಂದಾಜು ವೆಚ್ಚ, ಟೆಂಡರ್, ಗುತ್ತಿಗೆ, ಹಣ ಬಿಡುಗಡೆ ಸೇರಿದಂತೆ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.  ಉದ್ದೇಶಿತ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸ್ವತಂತ್ರ ತಾಂತ್ರಿಕ ತನಿಖೆ ನಡೆಸಬೇಕು. ಜೊತೆಗೆ ಯೋಜನಾ ವರದಿ, ನಕ್ಷೆ, ಅಂದಾಜು ವೆಚ್ಚ ಮತ್ತು ಟೆಂಡರ್ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಫುಟ್‌ಬಾಲ್ ಆಟಗಾರರಿಗೆ ಪರ್ಯಾಯ ಸ್ಥಳದಲ್ಲಿ ಪ್ರತ್ಯೇಕ ಹಾಗೂ ವೈಜ್ಞಾನಿಕ ಕ್ರೀಡಾಂಗಣ ನಿರ್ಮಿಸಬೇಕು ಎಂದು ಮೆಣಸಿನಕಾಯಿ ಆಗ್ರಹಿಸಿದ್ದಾರೆ.  ಜನರ ಆಕ್ಷೇಪಗಳನ್ನು ನಿರ್ಲಕ್ಷಿಸಿ ಕಾಮಗಾರಿ ಮುಂದುವರಿಸಿದರೆ ಕಾನೂನು ಹೋರಾಟ, ಶಾಂತಿಯುತ ಪ್ರತಿಭಟನೆ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.