ಸುಲ್ತಾನಪುರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ ವಿತರಣೆ

ಸುಲ್ತಾನಪುರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ ವಿತರಣೆ  Distribution of free shoes and socks to Sultanapura government school children


ಪಾಲಬಾವಿ, ಸೆ.23: ಸಮೀಪದ ಸುಲ್ತಾನಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ವತಿಯಿಂದ 1ರಿಂದ 8ನೇ ತರಗತಿಯ 213 ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್‌ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುಪಾದ ಚೌಗಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ ವಿತರಿಸುವುದರಿಂದ ಮಕ್ಕಳಲ್ಲಿ ಸಂತಸ ಮೂಡಿದ್ದು, ಶಾಲೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಲಿಕೆಗೆ ಉತ್ತೇಜನ ದೊರೆಯುತ್ತದೆ ಎಂದರು.  

ಶಾಲೆಯ ಪ್ರಭಾರಿ ಮುಖ್ಯಗುರು ಎಸ್‌.ಎನ್‌. ಬುಲ್ರಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್ಗಳನ್ನು ಸರಿಯಾಗಿ ಬಳಸಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರದ ಈ ಯೋಜನೆಯು ಪೋಷಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜತೆಗೆ ಮಕ್ಕಳಲ್ಲಿ ಸಮಾನತೆಯ ಮನೋಭಾವ ಬೆಳೆಸಲು ಸಹಕಾರಿಯಾಗಿದೆ ಎಂದರು.  

ಈ ಸಂದರ್ಭದಲ್ಲಿ ಅಶೋಕ ಚೌಗಲಾ, ಗುರುಪಾದ ಚೌಗಲಾ, ರಾಜು ಹುಕ್ಕೇರಿ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ವಿವೇಕಾನಂದ ನಾಯಿಕ, ಅದೃಶ್ಯಪ್ಪ ಪಾಟೀಲ, ಬಸವರಾಜ ಮಾದರ, ದುಂಡಯ್ಯ ಹಿರೇಮಠ, ಶಿಕ್ಷಕರಾದ ಸಂಜಯ ಹಿಪ್ಪರಗಿ, ಶಿವಾನಂದ ದುಲಾರಿ, ಎಸ್‌.ಜಿ.ಚೌಗಲಾ, ಅತಿಥಿ ಶಿಕ್ಷಕರಾದ ವಿಠ್ಠಲ ಮಾದರ, ಸಾಕ್ಷಿ ಚೌಗಲಾ, ಸ್ವಾತಿ ಬಿಳ್ಳೂರ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.