ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ

ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ  Distribution of assistive devices to children with special needs

ಬೆಳಗಾವಿ 14: ವಿಶೇಷ ಚೇತನ ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.  

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್‌. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣಾ ಸಮಾರಂಭ ನಡೆಯಿತು. ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಿದರು.  

ಬೆಳಗಾವಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳ ಒಟ್ಟು 44 ವಿಶೇಷ ಚೇತನ ಮಕ್ಕಳಿಗೆ 70 ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಮಕ್ಕಳ ಅಗತ್ಯಕ್ಕೆ ಅನುಗುಣವಾಗಿ ಒದಗಿಸಿದ ಈ ಸಾಧನಗಳು ಅವರ ಶೈಕ್ಷಣಿಕ ಚಟುವಟಿಕೆಗಳು, ಶಾಲಾ ಸಂಚಾರ ಹಾಗೂ ದೈನಂದಿನ ಜೀವನದಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯಲು ಸಹಕಾರಿಯಾಗಲಿವೆ.  

ಮಾತನಾಡಿದ ಮೃಣಾಲ್ ಹೆಬ್ಬಾಳ್ಕರ್, ವಿಶೇಷ ಚೇತನ ಮಕ್ಕಳಿಗೆ ಅನುಕೂಲಕರ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಪ್ರತಿಭೆ ಹಾಗೂ ಸಾಮರ್ಥ್ಯ ಗುರುತಿಸಿ ಅಗತ್ಯ ನೆರವು ಮತ್ತು ಪ್ರೋತ್ಸಾಹ ನೀಡಿದರೆ ಅವರು ಇತರ ಮಕ್ಕಳಂತೆ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುಂಡಲೀಕ ಎಸ್‌. ಚವಾಣ್, ಎಸ್ಡಿಎಂಸಿ ಅಧ್ಯಕ್ಷ ವಿಕ್ರಂ ಮುತಗೇಕರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ ನಾಯಕ, ಗ್ರಾಮ ಲೆಕ್ಕಾಧಿಕಾರಿ ಅನಿತಾ ಪಾಟೀಲ, ಗ್ರಾಮೀಣ ವಲಯದ ಸಮನ್ವಯಾಧಿಕಾರಿ ಡಾ. ದಾನಮ್ಮ ರಜುಳಕಿ, ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕೋಲಕಾರ, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.