ವಿಕಸಿತ ಕೃಷಿ ಸಂಕಲ್ಪ ಅಭಿಯಾನ: ಡ್ರೋನ್ ಪ್ರಾತ್ಯಕ್ಷಿಕೆ ಹಾಗೂ ಸಸಿ ನೆಡುವ ಕಾರ್ಯಕ್ರಮ
ಗದಗ 06 : 2025-26 ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಅಂಗವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಮೇ 29 ರಿಂದ ಜೂ. 12ರ ವರೆಗೆ ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಕೃಷಿ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದೆ. 04ರಂದು ಎಂಟನೇಯ ದಿನ ನರಗುಂದ ಶಹರ, ಚಿಕ್ಕನರಗುಂದ, ಕಣಕಿಕೊಪ್ಪ, ಶಿರೋಳ, ಖಾನಾಪೂರ, ಹಾಗೂ ಸುರಕೋಡ ಗ್ರಾಮಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸರಕಾರದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ, ಕೃಷಿ ಸಖಿಯರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳು, ಪಶು ಸಖಿಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರೈತ ಮುಖಂಡರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಈ ಅಭಿಯಾನದಲ್ಲಿ ವಿಶೇಷವಾಗಿ ಡ್ರೋನ್ ಪ್ರಾತ್ಯಕ್ಷಿಕೆಯನ್ನು ಖಾನಾಪೂರ ಗ್ರಾಮದಲ್ಲಿ ಮಾಡಲಾಯಿತು. ಡ್ರೋನ್ ದೀದಿಯವರು ಡ್ರೋನ್ ಬಳಸಿ ವಿವಿಧ ಬೆಳೆಗಳಿಗೆ ಪೋಷಕಾಂಶಗಳ ಸಿಂಪರಣಾ ವಿಧಾನವನ್ನು ವಿವರಿಸಿದರು. ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತಿ, ನರಗುಂದ ಇವರ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಕೂಡ ನೆರವೇರಿಸಲಾಯಿತು. ವಿವಿಧ ತಂತ್ರಜ್ಞಾನಗಳಾದ ಬೀಜೋಪಚಾರ, ಸುಧಾರಿತ ತಳಿಗಳು, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಕೃಷಿ ಯಂತ್ರೋಪಕರಣಗಳು, ಸಮಗ್ರ ಕೃಷಿ ಪದ್ಧತಿಗಳ ತರಬೇತಿ ನೀಡಲಾಯಿತು.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಮುಂಗಾರು ಹಂಗಾಮಿನ ಅಡಿ ಅಭಿವೃದ್ಧಿ ಪಡಿಸಿದ ಮುಂಗಾರು ಬೆಳೆಗಳಾದ ಹೆಸರು, ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ, ಈರುಳ್ಳಿ ಬೆಳೆಗಳ ಕುರಿತ ಕೃಷಿ ಕೈಪಿಡಿಯನ್ನು ರೈತರಿಗೆ ನೀಡಲಾಯಿತು. ಜೊತೆಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಹಸ್ತಪ್ರತಿಗಳನ್ನು ವಿತರಿಸಲಾಯಿತು. ನರಗುಂದ ತಾಲೂಕಿನ 1032 ಜನ ರೈತ ಹಾಗೂ ರೈತ ಮಹಿಳೆಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.