ಎಐ ಚಿತ್ರಗಳ ಮೂಲಕ ಕನ್ನಡ ಸಂಘಟನೆಗಳ ಅವಹೇಳನ: ಕ್ರಮಕ್ಕೆ ಆಗ್ರಹ
ಬೆಳಗಾವಿ, ಆ. 21: ಕನ್ನಡ ಸಂಘಟನೆಗಳು ಹಾಗೂ ಕನ್ನಡ ಮುಖಂಡರನ್ನು ಅವಹೇಳನ ಮಾಡುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಲಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವವರನ್ನು ಪತ್ತೆಹಚ್ಚಿ, ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಸಂಜೆ ಬೆಳಗಾವಿ ಪೊಲೀಸ್ ಆಯುಕ್ತರಾದ ಶ್ರೀ ಭೂಷಣ ಬೊರಸೆ ಅವರಿಗೆ ದೂರು ಸಲ್ಲಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಿಬಿಡದಂತೆ ಪೊಲೀಸ್ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಕೆಲವರು ಎಐ ತಂತ್ರಜ್ಞಾನ ಬಳಸಿ ಕನ್ನಡ ಸಂಘಟನೆಗಳು ಮತ್ತು ಮುಖಂಡರನ್ನು ಹೀಯಾಳಿಸುವ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ತಾಂತ್ರಿಕವಾಗಿ ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ದೂರು ಸ್ವೀಕರಿಸಿದ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅವಹೇಳನಕಾರಿ ಪೋಸ್ಟ್‌ಗಳನ್ನು ಹರಿಬಿಟ್ಟವರನ್ನು ಪತ್ತೆಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಕನ್ನಡ ಮುಖಂಡರಿಗೆ ಭರವಸೆ ನೀಡಿದರು.
ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕೋಲಾ, ಕನ್ನಡ ಹೋರಾಟಗಾರ ಸಯ್ಯದ್ ಮನ್ಸೂರ್ ಹಾಗೂ ಮಾಜ್ ಸಯ್ಯದ್ ಅವರು ದೂರು ಸಲ್ಲಿಸಿ ಸಹಿ ಹಾಕಿದರು.