ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ನೀಡಲು ಬಲವಾದ ಕೂಗು

ಹುಕ್ಕೇರಿ 31: ತಾಲೂಕಿನ ಬೆಲ್ಲದ ಬಾಗೇವಾಡಿ, ಘೋಡಗೇರಿ, ಎಲಿಮುನ್ನೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತು ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರಿಗೆ ಬಿಜೆಪಿ ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭೆ ಟಿಕೆಟ್ ನೀಡಬೇಕು ಎಂಬ ಬಲವಾದ ಕೂಗು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕತ್ತಿ ಬೆಂಬಲಿಗರು ಮತ್ತು ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. 

ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ಸಭಾಗೃಹದಲ್ಲಿ ಮಂಗಳವಾರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ರವೀಂದ್ರ ಹಿಡಕಲ್, ಹಿರಿಯ ನ್ಯಾಯವಾದಿ ಬಿ.ಕೆ.ಮಗೆನ್ನವರ, ಶ್ರೀಶೈಲ ಮಠಪತಿ ಸೇರಿದಂತೆ ಬಹುತೇಕ ಮುಖಂಡರು, ರಮೇಶ ಕತ್ತಿ ಅವರ ಸಾಮಾಜಿಕ ಸೇವೆ ಪರಿಗಣಿಸಿ ಅವರಿಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. 

ಈ ಹಿಂದಿನ ಚಿಕ್ಕೋಡಿ ಲೋಕಸಭೆ ಕ್ಷೇತ್ರ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ ಕತ್ತಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಆದರೂ ಪಕ್ಷದ ವರಿಷ್ಠರ ಮೇಲೆ ಧೃತಿಗೆಡದೇ ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದಾರೆ. ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ರಮೇಶ ಕತ್ತಿಗೆ ಬೆಳಗಾವಿ ಇಲ್ಲವೇ ಚಿಕ್ಕೋಡಿ ಬಿಜೆಪಿ ಎಂಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. 

2009 ರಿಂದ 2014ರ ಅವಧಿಯಲ್ಲಿ ರಮೇಶ ಕತ್ತಿ ಅವರು ಚಿಕ್ಕೋಡಿ ಕ್ಷೇತ್ರದ ಸಂಸದರಾಗಿ ಮನೆ ಮಾತಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸುಮಾರು ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಜಿಲ್ಲೆಯ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರಾಜಕೀಯ ಹಿನ್ನಲೆ, ಅನುಭವ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಹೀಗೆ ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಗುರುತಿಸಿ ರಮೇಶ ಕತ್ತಿಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು. 

ಹಿರಾಶುಗರ ನಿರ್ದೇಶಕರಾದ ಬಸವರಾಜ ಮರಡಿ, ಅಜ್ಜಪ್ಪ ಕಲ್ಲಟ್ಟಿ, ಸುರೇಂದ್ರ ದೊಡಲಿಂಗನವರ, ಪುರಸಭೆ ಮಾಜಿ ಅಧ್ಯಕ್ಷರಾದ ಎ.ಕೆ.ಪಾಟೀಲ, ವಾಗ್ದೇವಿ ತಾರಳಿ, ಸದಸ್ಯ ರಾಜು ಮುನ್ನೋಳಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ರಾಚಯ್ಯ ಹಿರೇಮಠ, ಪರಗೌಡ ಪಾಟೀಲ, ಶೀತಲ ಬ್ಯಾಳಿ, ಕೆಎಂಎಫ್ ನಿರ್ದೇಶಕ ರಾಯಪ್ಪಾ ಢೂಗ, ಮುಖಂಡರಾದ ನಜೀರಅಹ್ಮದ ಮೋಮಿನದಾದಾ, ಭೀಮಗೌಡ ಗಿರಿಗೌಡನವರ, ಮಹಾನಿಂಗ ಸನದಿ, ಶಿವನಗೌಡ ಪಾಟೀಲ, ಮುಕುಂದ ಮಠದ, ಸುಚೀತ ಪಾಟೀಲ, ಅಶೋಕ ಅಂಕಲಗಿ, ಬಸವರಾಜ ತಳವಾರ, ಗೀರೀಶ ಪಾಟೀಲ, ಸುನೀಲ ಬೈರನ್ನವರ, ಬಾಹುಬಲಿ ನಾಗನೂರಿ, ಚನ್ನಪ್ಪ ಗಜಬರ, ಸಿದ್ದಪ್ಪ ಹಳಿಜೋಳ, ಮುನ್ನಾ ಕಳಾವಂತ, ಬಸಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.