ಆಲಮೇಲ, ಸಿಂದಗಿ ತಾಲೂಕು ಬರಪೀಡಿತ ಎಂದು ಘೋಷಿಸಲು ಆಗ್ರಹ

ಆಲಮೇಲ, ಸಿಂದಗಿ ತಾಲೂಕು ಬರಪೀಡಿತ ಎಂದು ಘೋಷಿಸಲು ಆಗ್ರಹ  Demand to declare Almel and Sindagi taluks drought-hit


ಆಲಮೇಲ, ಆ.30: ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆಯಲ್ಲಿ ರೈತರಿಗೆ ತಾರತಮ್ಯ ಮಾಡುತ್ತಿದ್ದು, ರೈತರಿಗೆ ಅನ್ಯಾಯವೆಸಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.  

ಶನಿವಾರ ಆಲಮೇಲ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸಿಂದಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ವಿಜಯಪುರ ಜಿಲ್ಲೆಯ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದನ್ನು ಬಿಜೆಪಿ ಖಂಡಿಸುತ್ತದೆ. ಬರಪೀಡಿತ ತಾಲೂಕು ಘೋಷಣೆಯಿಂದ ರೈತರಿಗೆ ಪರಿಹಾರ ಹಾಗೂ ಬೆಳೆವಿಮೆ ಸೌಲಭ್ಯ ದೊರೆಯಲಿದ್ದು, ಕೂಡಲೇ ಆಲಮೇಲ ಹಾಗೂ ಸಿಂದಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.  

ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಸಮರ​‍್ಕವಾಗಿ ಆಗದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯನ್ನೇ ಅವಲಂಬಿಸಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕಿ ಆತಂಕಕ್ಕೊಳಗಾಗಿದ್ದಾರೆ ಎಂದರು.  

ಕೂಡಲೇ ಆಲಮೇಲ ಹಾಗೂ ಸಿಂದಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದರೆ ರಾಜ್ಯ ಸರ್ಕಾರವನ್ನು ಅಭಿನಂದಿಸಲಾಗುವುದು. ಇಲ್ಲವಾದಲ್ಲಿ ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.  

ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ನಂಬಳ, ರೈತ ಮೋರ್ಚಾ ಅಧ್ಯಕ್ಷ ಈರ​‍್ಪ ಕೆರೂರ, ಈರಣ್ಣ ರಾವೂರ, ಚಿದಾನಂದ ಚಲವಾದಿ, ಪ್ರಭುಗೌಡ ಪಾಟೀಲ, ಸಿದ್ದರಾಮ ಆನಗೊಂದಿ, ದೇವಪ್ಪ ಗುಣಾರಿ, ಬಾಬುಗೌಡ ಬಿರಾದಾರ, ಗುರು ತಳವಾರ, ಶ್ರೀಶೈಲ ಭೋವಿ, ಸಂಜುಕುಮಾರ ಎಂಟಮಾನ, ಅಪ್ಪು ಶೆಟ್ಟಿ, ಗುಂಡು ಮೇಲಿನಮನಿ, ಪ್ರದೀಪ ಗೌರ, ಹರೀಶ ಎಂಟಮಾನ, ಅಲೋಕ ಬಡದಾಳ, ರತನ ಒಣಕುದರಿ, ಮದನ ರಜಪೂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.