ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಕ್ಕೆ ಆಗ್ರಹ

ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಕ್ಕೆ ಆಗ್ರಹ  Demand for title deeds for submergence-affected people


ಕೊಲ್ಹಾರ ಸೆ.17: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಹಾಗೂ ಮನೆ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷ ಕಳೆದರೂ ಹಕ್ಕುಪತ್ರ ಮತ್ತು ಉತಾರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.  

ಸಾವಿರಾರು ರೈತರು ಬಾರಕೋಲು ಚಳವಳಿ ನಡೆಸಿ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು. ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಆಲಮಟ್ಟಿ ಅಣೆಕಟ್ಟು ಎತ್ತರ, ಭೂ ಪರಿಹಾರ, ನೀರಾವರಿ ಸೇರಿದಂತೆ ರೈತರ ಬೇಡಿಕೆಗಳಿಗೆ 1 ಲಕ್ಷ ಕೋಟಿ ಅನುದಾನ ನೀಡಬೇಕು.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ 50 ಲಕ್ಷ ಜನರ ಸಮ್ಮುಖದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದರು. ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ರೈತರ ಪ್ರಮುಖ ಬೇಡಿಕೆಗಳು: 1996ರ ಮುಳುಗಡೆ ಸಂತ್ರಸ್ತರಿಗೆ ತಕ್ಷಣ ಹಕ್ಕುಪತ್ರ ಹಾಗೂ ಉತಾರ ವಿತರಿಸಬೇಕು. ಮುಳವಾಡ ಏತ ನೀರಾವರಿ ಯೋಜನೆಯಡಿ ವಿಜಯಪುರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು.

ಜನವರಿಯಿಂದ ಜುಲೈವರೆಗೆ ಕುಡಿಯುವ ನೀರಿಗಾಗಿ 20 ಟಿಎಂಸಿ ನೀರು ಕಾಯ್ದಿರಿಸಬೇಕು. ಕೃಷಿ ಪಂಪ್ಸೆಟ್ಗಳಿಗೆ ಬೆಳಗ್ಗೆ 7 ಗಂಟೆ 3-ಫೇಸ್ ಹಾಗೂ ರಾತ್ರಿ ಸಿಂಗಲ್‌-ಫೇಸ್ ವಿದ್ಯುತ್ ನಿರಂತರವಾಗಿ ಪೂರೈಸಬೇಕು.  

ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಾಗರ, ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಸೇರಿದಂತೆ ಸಾವಿರಾರು ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.