ಕಳಪೆ ಕಾಮಗಾರಿ ಮಾಡಿ ಜೀವ ಜಲ ಹಿಡಿದಿಟ್ಟುಕೊಳ್ಳಲು ವಿಫಲರಾದ ಅಧಿಕಾರಿಗಳ ಅಮಾನತಿಗೆ ಒತ್ತಾಯ

ರಾಣೇಬೆನ್ನೂರು 25: ರಾಜ್ಯದಲ್ಲಿ ಕಳೆದ ಬಾರಿಯ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಭೀಕರ ಬರಗಾಲ ಎದುರಾಗಿ ಜಲಾಶಯಗಳು ತುಂಬಲಿಲ್ಲ, ಪರಿಣಾಮ ಬೇಸಿಗೆ ಬರುತ್ತಲೇ ಕುಡಿಯುವ ನೀರಿನ ಹಾಹಾಕಾರವಾಗಿ ಜೀವ ಸಂಕುಲ ವಿಲಿವಿಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಉತ್ತರ ಕರ್ನಾಟಕದ ಪ್ರಮುಖ ನದಿಯಾದ ತುಂಗಭದ್ರೆ ಬತ್ತಿ ಬಸವಳಿದಾಗ ಉತ್ತರ ಕರ್ನಾಟಕದ ಹೆಬ್ಬಾಗಿಲು ಮಾಕನೂರು ಕ್ರಾಸ್ ಹತ್ತಿರ ರೈತಪರ, ಕನ್ನಡಪರ ಸಂಘಟನೆಗಳು ಹೆದ್ದಾರಿ ತಡೆದು ಭದ್ರಾ ಡ್ಯಾನಿಂದ 2.1 ಟಿ.ಎಂ.ಸಿ. ನೀರು ಬಡುಗಡೆಗೆ ಒತ್ತಾಯಿಸಿದ್ದು ಸರಕಾರ ತಕ್ಷಣವೇ ಸ್ಪಂದನೆ ಮಾಡಿ ನದಿಗೆ ನೀರು ಹರಿಸಿದ್ದು ಇತಿಹಾಸ.  

ತುಂಗಭದ್ರಾ ನದಿಗೆ ಬಿಟ್ಟ 2.1 ಟಿ.ಎಂ.ಸಿ. ನೀರು ಕಡಿಮೆಯಾಗುತ್ತಿದ್ದಂತೆ ರಾಣೇಬೆನ್ನೂರ ಶಹರ ಮತ್ತು ಹಲಗೇರಿ ಹಾಗೂ ಬ್ಯಾಡಗಿ ಪಟ್ಟಣಕ್ಕೆ ರಾಣೇಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಹತ್ತಿರದ ತುಂಗಭದ್ರಾ ನದಿಯ ಜಾಕ್‌ವೆಲ್ ಮೂಲಕ ಕುಡಿಯುವ ನೀರಿ ವ್ಯವಸ್ಥೆಯಲ್ಲಿ ಇನ್ನು ಎರಡು ತಿಂಗಳುಗಳ ಕಾಲ ಸಾಕಾಗುವಷ್ಟು ನೀರನ್ನು ಮರಳಿನ ಚೀಲದ ತಡೆಗೋಡೆಯನ್ನು ನಿರ್ಮಿಸಿ ಸಂಗ್ರಹಿಸಿಕೊಳ್ಳವ ಯೋಜನೆಯನ್ನು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ರಾಣೇಬೆನ್ನೂರು ನಗರ ಸಭೆ ಮಾಡಿ, ಮುದೇನೂರು ತಂಗಭದ್ರಾ ನದಿಯ ಹತ್ತಿರದ ಜಾಕ್‌ವೆಲ್ ಹತ್ತಿರ ಸಾವಿರಾರು ಮರಳಿನ ಚೀಲದ ತಡೆಗೋಡೆ ಮಾಡಿ ನೀರು ಸಂಗ್ರಹಿಸಿವ ಕಾರ್ಯಕ್ಕೆ ಲಕ್ಷ, ಲಕ್ಷ ಖರ್ಚು ಮಾಡಿತ್ತು. ಆದರೆ. ನಗರಸಭೆಯ ತಾಂತ್ರಿಕ ವರ್ಗದವರ ನಿರ್ಲಕ್ಷ್ಯತನ, ಅವೈಜ್ಞಾನಿಕ ನೀತಿ, ಕಳಪೆ ಕಾಮಗಾರಿಯಿಂದ ನೀರು ಸಂಗ್ರಹವಾಗದೆ ಸಂಪೂರ್ಣ ನೀರು ಪೋಲಾಗಿದ್ದು ಇಂಥ ಭೀಕರ ನೀರಿನ ಬವಣೆ ಇದ್ದಾಗಲೂ ಇಷ್ಟೊಂದು ಬೇಜವಬ್ದಾರಿತನದ ಕಾಮಗಾರಿ ಮಾಡಿರುವ ಹಿರಿಯ ಅಧಿಕಾರಿ ನೀರಿನ ಹಾಹಾಕಾರಕ್ಕೆ ಕಾರಣರಾಗಿ, ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಿಸಬೇಕೆಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದ್ದಾರೆ.  

ಅವರು ಇಂದು ಮುದೇನೂರು ಹತ್ತಿರ ತುಂಗಭದ್ರಾ ನದಿಗೆಯ ನೀರು ಸಂಗ್ರಹಿಸಲು ರಾಣೇಬೆನ್ನೂರು ನಗರಸಭೆಯವರು ನಿರ್ಮಿಸಿದ್ದ ಮರಳಿನ ತಡೆಗೋಡೆ ಹತ್ತಿರ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು ನೀರಿನ ಬವಣೆಯನ್ನು ಅರಿಯದೆ ಜೀವ ಸಂಕುಲದ ಜೊತೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳ ನಡೆ ಅಕ್ಷಮ್ಯ ಎಂದರು.  

 ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ಇಂಥ ಮರಳಿನ ಚೀಲದ ತಡೆಗೋಡೆ ಕಾಮಗಾರಿಯಲ್ಲಿಯೂ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಸಿಸಬೇಕು. ಈಗ ವಿನಾಃಕಾರಣ ಹರಿಯುತ್ತಿರುವ ಈ ನೀರನ್ನಾದರೂ ತಾಂತ್ರಿಕತೆ ಬಳಸಿ ನೀರನ್ನು ನಿಲ್ಲಿಸಿ ಕನಿಷ್ಠ ‘2’ ತಿಂಗಳಿಗಾಗುವಷ್ಟು ನೀರನ್ನು ಸಂಗ್ರಹಿಸಬೇಕೆಂದು. ಉಪ ತಹಶೀಲ್ದಾರ್‌. ಎಂ.ಎಸ್‌. ಕಡೂರ ಸ್ಥಳಕ್ಕೆ ದಾವಿಸಿ ಪ್ರತಿಭಟನಾಕಾರದಿಂದ ಮನವಿ ಸ್ವೀಕರಿಸಿ ಡಿವಿಜನ್ ಕಮೀಷನರ್ ಮತ್ತು ಜಿಲ್ಲಾಧಿಕಾರಿಗಳಿಗೆ ತುರ್ತು ಮನವಿ ಕಳಿಹಿಸಿಕೊಡಲಾಗುವುದೆಂದರು. ದೇವರಾಜ ಜೇಗ್ಲಿ, ಚಂದ್ರ​‍್ಪ ಮಾಳಗಾರ, ಷಣ್ಮುಖನಗೌಡ ಗಂಗನಗೌಡ್ರ, ಹುಸೇನ್‌ಸಾಬ ದೊಡ್ಮನಿ, ಬುಳ್ಳಪ್ಪ ಬಾವಿಕಟ್ಟಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರು ಮುಂತಾದವರು ಇದ್ದರು.