ಕಬ್ಬಿನ ದರ ಏರಿಕೆ ಬೆನ್ನಲ್ಲೇ ರೈತರಿಗೆ ಎರಡನೇ ಬಿಲ್ ನೀಡಲು ಆಗ್ರಹ
ಸಂಬರಗಿ 26: ಕಬ್ಬಿನ ಸಕ್ಕರೆ ದರ ಕೆಜಿಗೆ ರೂ70ರಿಂದ ರೂ75ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಸಕ್ಕರೆ ಕಾರ್ಖಾನೆಗಳು ಎರಡನೇ ಬಿಲ್ ಘೋಷಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಗಣಪತಿ ಹಬ್ಬಕ್ಕೂ ಮುನ್ನವೇ ರೈತರಿಗೆ ಎರಡನೇ ಬಿಲ್ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅಥಣಿ ತಾಲ್ಲೂಕಿನಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಸಕ್ಕರೆ ದರ ಏರಿಕೆಯಾಗಿದ್ದರೂ ರೈತರಿಗೆ ಅದರ ಲಾಭ ಸಮರ್ಕವಾಗಿ ದೊರೆಯುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಎರಡನೇ ಬಿಲ್ ರೂ500 ಆಗಿರಬೇಕು ಹಾಗೂ 2026-27ನೇ ಸಾಲಿನ ಕಬ್ಬಿಗೆ ಪ್ರತಿ ಟನ್ಗೆ ರೂ5,000 ನಿವ್ವಳ ದರ ನೀಡಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ರೈತ ಸಂಘದ ವತಿಯಿಂದ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.