ಯುಜಿಡಿ ಕಾಮಗಾರಿ ವಿಳಂಬ: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ
ದಾಂಡೇಲಿ ಆ.25: ಇಲ್ಲಿನ ಅರಣ್ಯ ಇಲಾಖೆ ಟಿಂಬರ್ ಡಿಪೋ ರಸ್ತೆಯ ದುರಸ್ತಿಗೆ ಆಗ್ರಹಿಸಿ ಮಾಜಿ ನಗರಸಭಾ ಸದಸ್ಯ ರಾಮಲಿಂಗ ಜಾಧವ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಯುಜಿಡಿ ಕಾಮಗಾರಿಯಿಂದ ಚೆನ್ನಾಗಿದ್ದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಮಳೆಯಿಂದಾಗಿ ಕೆಸರು ತುಂಬಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಯುಜಿಡಿ ಅಧಿಕಾರಿಗಳು ರಸ್ತೆಯನ್ನು ಮೊದಲಿನಂತೆಯೇ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ನೀಡಿದ ಮಾತಿನಂತೆ ರಸ್ತೆ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ರಾಮಲಿಂಗ ಜಾಧವ್ ಹೇಳಿದರು.