ನಕಲಿ ಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಹಾಕಿ: ಕಠಿಣ ಕ್ರಮಕ್ಕೆ ಆಗ್ರಹ

ನಕಲಿ ಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಹಾಕಿ: ಕಠಿಣ ಕ್ರಮಕ್ಕೆ ಆಗ್ರಹ  Curb fake caste certificates: Demand for strict action

ಗದಗ, ಆ.14: ಜಿಲ್ಲೆಯಲ್ಲಿ ನಕಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣಪತ್ರಗಳ ಹಾವಳಿ ತಡೆದು, ಅವುಗಳ ಆಧಾರದ ಮೇಲೆ ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಎಸ್ಸಿ/ಎಸ್ಟಿ ನಕಲಿ ಜಾತಿ ಪ್ರಮಾಣಪತ್ರ ತಡೆ ಸಮಿತಿ ಗದಗ ಜಿಲ್ಲಾ ಘಟಕ ಆಗ್ರಹಿಸಿದೆ.  

ಈ ಕುರಿತು ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಕಲಿ ಜಾತಿ ಪ್ರಮಾಣಪತ್ರ ಪಡೆದು ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಪ್ರವೇಶ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ ಸುಳ್ಳು ದಾಖಲೆಗಳನ್ನು ನೀಡಿ ವಂಚಿಸಿರುವ ಪಾಲಕರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ-1989ರಡಿ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.  

ಜಿಲ್ಲೆಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಜಾತಿಗಳಿಗೆ ಜಾತಿ ಪ್ರಮಾಣಪತ್ರ ನೀಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ‘ಕೋಳಿ ಡೋರ್, ಕಾಡು ಕುರುಬ, ಟೋಕರಿ ಕೋಳಿ, ಬೇಡ ಜಂಗಮ’ ಸೇರಿದಂತೆ ಜಿಲ್ಲೆಯಲ್ಲಿ ವಾಸವಿಲ್ಲದ ಕೆಲವು ಸಮುದಾಯಗಳಿಗೆ ಜಾತಿ ಪ್ರಮಾಣಪತ್ರ ನೀಡಿರುವ ಆರೋಪಗಳಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರದವರು ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಕಲಿ ಪ್ರಮಾಣಪತ್ರ ಪಡೆದು ಸರ್ಕಾರಿ ಸೌಲಭ್ಯ, ಉದ್ಯೋಗ ಹಾಗೂ ಮೀಸಲು ಕ್ಷೇತ್ರಗಳಲ್ಲಿ ಚುನಾವಣಾ ಅವಕಾಶಗಳನ್ನು ಪಡೆದಿರುವುದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಮಿತಿ ಆರೋಪಿಸಿತು.  

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ನಕಲಿ ಪ್ರಮಾಣಪತ್ರ ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಒತ್ತಾಯಿಸಿತು.  ಜಿಲ್ಲಾಧಿಕಾರಿಗಳ ಸ್ಪಂದನೆ: ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳದಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತನಿಖೆ ನಡೆಸುವಂತೆ ಸೂಚಿಸಿದರು. ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.  

ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ/ಎಸ್ಟಿ ನಕಲಿ ಜಾತಿ ಪ್ರಮಾಣಪತ್ರ ತಡೆ ಸಮಿತಿ ಗದಗ ಜಿಲ್ಲಾಧ್ಯಕ್ಷ ಶ್ರೀಕಾಂತ ಪೂಜಾರ, ವಾಲ್ಮೀಕಿ ಸಮುದಾಯದ ಮುಖಂಡ ಗೋವಿಂದರಾಜ ಪನ್ನೂರ, ದಲಿತ ಯುವ ಮುಖಂಡ ರಮೇಶ ಕಡೇಮನಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಅಧ್ಯಕ್ಷ ಅನಿಲ್ಕುಮಾರ್ ಸಿದ್ದಮ್ಮನಹಳ್ಳಿ, ಎಸ್ಸಿ/ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ-1989ರ ಗದಗ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಮಾಜಿ ಸದಸ್ಯ ಸುರೇಶ ಚಲವಾದಿ ಸೇರಿದಂತೆ ಬಸವರಾಜ ಮುಳ್ಳಾಳ, ಬಸವರಾಜ ಕುರುಗೋಡು, ಚಂದ್ರು ಮುಂಡರಗಿ, ವಸಂತ ವಾಲ್ಮೀಕಿ, ಸೋಮು ಕೊಳವಾಡ, ಮಂಜುನಾಥ ವಾಲ್ಮೀಕಿ, ರಾಮು ಬಾಗಲಕೋಟ, ಗೋಪಾಲ ಗಡಾದ, ಕಿರಣ ನಾಯ್ಕ, ನಾಗರಾಜ ಯರಗುಡಿ, ಸಿದ್ದು ಹುಲಣ್ಣವರ, ಮಣಿಕಂಠ ಎಲಿಗಾರ, ಶ್ರೀಕಾಂತ್ ಗೌಡರ್ ಮತ್ತಿತರರು ಉಪಸ್ಥಿತರಿದ್ದರು.