ಶಾಲಾ ಮಕ್ಕಳಿಗೆ ಹಾಲಿನ ಪೌಷ್ಟಿಕತೆ ಕುರಿತು ಜಾಗೃತಿ

ಶಾಲಾ ಮಕ್ಕಳಿಗೆ ಹಾಲಿನ ಪೌಷ್ಟಿಕತೆ ಕುರಿತು ಜಾಗೃತಿ  Creating awareness among school children about the nutritional value of milk


ಬಳ್ಳಾರಿ 20: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ (ಕೆಎಂಎಫ್) ಹಾಗೂ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ರಾಬಕೋವಿ) ಸಹಯೋಗದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್‌. ಸುದರ್ಶನ್ ರೆಡ್ಡಿ, ಹಾಲು ಮಾನವನ ದೈನಂದಿನ ಜೀವನದಲ್ಲಿ ಅತ್ಯಂತ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ವಿಟಮಿನ್‌-ಬಿ2 ಸೇರಿದಂತೆ ಪ್ರಮುಖ ಪೋಷಕಾಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.  

ಒಕ್ಕೂಟವು ಪ್ರತಿದಿನ ಸರಾಸರಿ 2.50 ಲಕ್ಷ ಲೀಟರ್ ಗುಣಮಟ್ಟದ ಹಾಲನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ಸಂಸ್ಕರಿಸಿ, ಕಲಬೆರಕೆ ರಹಿತ ಹಾಗೂ ಸುರಕ್ಷಿತ ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಯೋಜನೆಗಳನ್ನು ಒಕ್ಕೂಟ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.  

ಎನ್‌ಎಚ್‌ಎಫ್ ಘಟಕದ ಅಪರ ನಿರ್ದೇಶಕ ರವಿಕಿರಣ್ ಅವರು ಶುದ್ಧ ನಂದಿನಿ ಐಸ್ಕ್ರೀಂ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ಫ್ರೋಜನ್ ಡೆಸರ್ಟ್ಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿ. ನಾಗರಾಜ ಶರ್ಮ ಅವರು ಸಮತೋಲನ ಆಹಾರದ ಮಹತ್ವ ಹಾಗೂ ನಂದಿನಿ ಉತ್ಪನ್ನಗಳಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಹಾಲಿನ ಶೇಖರಣೆ ಮತ್ತು ವೈಜ್ಞಾನಿಕ ಸಂಸ್ಕರಣಾ ವಿಧಾನಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಬಳಿಕ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಉತ್ಪನ್ನಗಳ ಕುರಿತು ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.  

ಶಾಲೆಯ ಪ್ರಾಂಶುಪಾಲರಾದ ಸರಸ್ವತಿ, ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಕೆ.ಆರ್‌. ಇಂದುಕಲಾ, ಜ್ಯೋತಿ, ಮಾರುಕಟ್ಟೆ ಮೇಲ್ವಿಚಾರಕರಾದ ಲೋಹಿತಕುಮಾರ್, ಪ್ರಸನ್ನಕುಮಾರ್, ಕೆಮಿಸ್ಟ್‌ ಎಚ್‌. ಸರೋಜ್ ಹಾಗೂ ಸಿಬ್ಬಂದಿಗಳಾದ ನೂರ್ ಮಹಮ್ಮದ್, ಸಿ.ಎನ್‌. ಮಂಜುನಾಥ್ ಮತ್ತು ಬಾಬು ಬಿ. ಉಪಸ್ಥಿತರಿದ್ದರು.