ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿ ಸಂಘಗಳು ಮುಂದಾಗಬೇಕು: ರಾಮನಗೌಡ ಪಾಟೀಲ

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿ ಸಂಘಗಳು ಮುಂದಾಗಬೇಕು: ರಾಮನಗೌಡ ಪಾಟೀಲ  Cooperative societies must step forward to create employment opportunities for the youth: Ramanagoud

ಇಂಡಿ, ಆ. 23: ರಾಜ್ಯದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದ್ದು, ಅವರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯದಿರುವುದು ಪ್ರಮುಖ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಕೇವಲ ಠೇವಣಿ ಸಂಗ್ರಹಣೆ ಹಾಗೂ ಸಾಲ ವಿತರಣೆಗೆ ಸೀಮಿತವಾಗದೆ, ವಿವಿಧ ಕ್ಷೇತ್ರಗಳ ತಜ್ಞರನ್ನು ಕರೆಸಿ ಯುವಕರಿಗೆ ತರಬೇತಿ ನೀಡಿ ಸ್ವಂತ ಉದ್ಯೋಗ ಆರಂಭಿಸಲು ಪ್ರೋತ್ಸಾಹಿಸಬೇಕು ಎಂದು ಸಿದ್ಧಸಿರಿ ಮಲ್ಟಿ ಪರ​‍್ಪಸ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.  ಅವರು ಭಾನುವಾರ ಇಂಡಿ ನಗರದಲ್ಲಿ ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.  

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸೌಹಾರ್ದ ಸಹಕಾರಿ ಸಂಘಗಳು ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.   ದೃಢಸಂಕಲ್ಪದಿಂದ ಮುನ್ನಡೆದರೆ ತಮಗೆ ಬೇಕಾದ ಗುರಿಯನ್ನು ಸಾಧಿಸಬಹುದು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಸಹಕಾರಿ ಸಂಘಗಳು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಯುವಕರಿಗೆ ತರಬೇತಿ, ಮಾರ್ಗದರ್ಶನ ಅಗತ್ಯ  

ಸಹಕಾರಿ ಸಂಘಗಳ ನೀರೀಕ್ಷಕ ವಿಜಯಕುಮಾರ ನಾಯಕ ಮಾತನಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಿಂದ ಯುವಕರಿಗೆ ದೊರೆಯುವ ವಿವಿಧ  ಕುರಿತು ತರಬೇತಿ ನೀಡಲಾಗುವುದು. ಇದರ ಜೊತೆಗೆ ಇಲಾಖೆಯಿಂದಲೂ ಅಗತ್ಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.  

ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ವಿಲಾಸಕುಮಾರ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಟಬು ಸಿಳ್ಳೇಕ್ಯಾತ ಸಮಾಜದ ಕುಲಗುರು ಕಲ್ಲಿನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕ್ಷತ್ರಿ ಅಧ್ಯಕ್ಷತೆ ವಹಿಸಿದ್ದರು.  

ವೇದಿಕೆಯಲ್ಲಿ ಕಟಬು, ಕಟಬರ ಸಮಾಜದ ರಾಜ್ಯಾಧ್ಯಕ್ಷ ಜಗದೀಶ ಕ್ಷತ್ರಿ, ಉದ್ಯಮಿದಾರ ರಮೇಶ ಗುತೇದಾರ, ಸ್ವತಂತ್ರ ಶಿಂಧೆ ಹಾಗೂ ಹಿರಿಯ ಪತ್ರಕರ್ತ ಎ.ಸಿ. ಪಾಟೀಲ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಸೌಹಾರ್ದ ಸಂಘದ ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸ್ವತಂತ್ರ ಶಿಂಧೆ ಸ್ವಾಗತಿಸಿದರು. ನಾರಾಯಣ ಶಿಂಧೆ ವಂದಿಸಿದರು.