ಕೊಳಗಲ್ಲು ಗ್ರಾಮದಲ್ಲಿ ಪುಣ್ಯಾರಾಧನೆಗೆ ಷರತ್ತುಬದ್ಧ ಅನುಮತಿ

ಕೊಳಗಲ್ಲು ಗ್ರಾಮದಲ್ಲಿ ಪುಣ್ಯಾರಾಧನೆಗೆ ಷರತ್ತುಬದ್ಧ ಅನುಮತಿ  Conditional permission granted for Punyaradhane in Kolagallu village


ಬಳ್ಳಾರಿ, ಸೆ. 24: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿರುವ ಪರಮಪೂಜ್ಯ ಏರಿತಾತನವರ 112ನೇ ಪುಣ್ಯಾರಾಧನೆ ಹಾಗೂ ಪರಮಪೂಜ್ಯ ಏರಿಸ್ವಾಮಿ ತಾತನವರ 13ನೇ ಪುಣ್ಯಾರಾಧನೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಧಾರವಾಡ ಉಚ್ಚ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ ಎಂದು ದೇವಸ್ಥಾನ ಸಮಿತಿಯ ಧರ್ಮಕರ್ತ ಹಾಗೂ ಉತ್ತರಾಧಿಕಾರಿ ಶ್ರೀ ಮುತ್ತಪ್ಪ ಸ್ವಾಮಿ ತಿಳಿಸಿದ್ದಾರೆ.  

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ 108097/2026ರಲ್ಲಿ ನೀಡಿರುವ ಆದೇಶದಂತೆ ಎಲ್ಲ ಸೂಚನೆಗಳನ್ನು ಪಾಲಿಸಿ ಪುಣ್ಯಾರಾಧನೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.  

ನ್ಯಾಯಾಲಯದ ಆದೇಶದನ್ವಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.  

ಸೆ. 23ರಿಂದ ಅ. 3ರವರೆಗೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಬಳ್ಳಾರಿ ತಹಶೀಲ್ದಾರ್ ಅವರಿಗೆ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ನ್ಯಾಯಾಲಯದ ನಿರ್ದೇಶನದಂತೆ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲು ಅಗತ್ಯ ಭದ್ರತೆ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.