ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಮುದಾಯ ಸಹಾಯಕ ಕಾರ್ಯಾಗಾರ

ಧಾರವಾಡ ಜ.30: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಲಯ 8 (ತೋಟಗಾರಿಕೆ), ಧಾರವಾಡ ಕೃಷಿ ಇಲಾಖೆ ಸಹಯೋಗದಲ್ಲಿ ನಿನ್ನೆ (29 ರಂದು) ನಗರದ ಕುಂಬಾಪುರದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಸಮುದಾಯ ಸಹಾಯಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರ  ಹಾಗೂ ಪರಿಶೀಲನಾ  ಸಭೆ ಜರುಗಿತು. 

ಪ್ರಗತಿಪರ ರೈತ ಮಂಜುನಾಥ ಯಲಿಗಾರ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಇದೇ ಮೊದಲಿಗೆ ತಾವು ಶೂನ್ಯ ಬಂಡವಾಳ ನೈಸರ್ಗಿಕ  ಕೃಷಿ ಮಾಡುವ ಮೂಲಕ ಅತ್ಯಂತ ಕಡಿಮೆ ಖರ್ಚಿ ನಲ್ಲಿ ಸೇವಂತಿಗೆ ಬೆಳೆಯನ್ನು ಬೆಳೆದು ಉತ್ತಮ ಇಳುವರಿ ಪಡೆದಿದ್ದೇನೆ ಎಂದು ತಿಳಿಸಿದರು.

ಶೂನ್ಯ ಬಂಡವಾಳ ನೈಸರ್ಗಿಕ   ಕೃಷಿ ಯೋಜನೆ ವಲಯ 8 (ತೋ) ರ ಮುಖ್ಯಸ್ಥರಾದ ಡಾ.ಆನಂದ  ಮಾಸ್ತಿಹೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯ ಸಹಾಯಕರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯ ನಿರ್ವಹಣೆಯ ಕುರಿತು ತಾಂತ್ರಿಕ ಮಾಹಿತಿಯನ್ನು ನೀಡಿದರು.

 ಪ್ರಾಧ್ಯಾಪಕ ಶಾಂತಪ್ಪಾ ತಿರುಕಣ್ಣವರ ಮಾತನಾಡಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಕಡಿಮೆ ಖರ್ಚಿನಲ್ಲಿಬೆಳೆಗಳನ್ನು ಬೆಳೆಯಬಹುದು. ಹಾಗೂ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ರೈತರು ಮುಂದುವರೆಸಿಕೊಂಡು ಹೋಗಿ ಉತ್ತಮ ಆದಾಯ ಪಡೆಯಬಹುದು ಎಂದು ತಿಳಿಸಿದರು. 

ಶಿಕ್ಷಣ ಹಾಗೂ ವಿಸ್ತರಣಾ ಘಟಕದ ಮುಖ್ಯಸ್ಥ ಡಾ.ಲಕ್ಷ್ಮಣ ಕೂಕನೂರ, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ  ಡಾ.ನಾಗೇಶ ನಾಯ್ಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ  ಕಾರ್ಯಾಗಾರದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ  ಕೃಷಿಗೆ ಸಂಭಂಧಿಸಿದಂತೆ ಮಣ್ಣು ಪರೀಕ್ಷೆ ಮಾದರಿ ಸಂಗ್ರಹಣೆ ವಿಧಾನ, ಕೀಟ ನಿರ್ವಹಣೆ, ಸಸ್ಯಗಳ ರೋಗ ನಿರ್ವಹಣೆ ಹಾಗೂ ಮಣ್ಣಿನಲ್ಲಿ ಸೂಕ್ಷ್ಮಾನುಜೀವಿಗಳ ಪಾತ್ರದ ಹಸ್ತ ಪ್ರತಿಗಳನ್ನು ಸಮುದಾಯ ಸಹಾಯಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ವಿತರಿಸಲಾಯಿತು.