ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು
Clearing of encroachment on government land worth crores
ಲೋಕದರ್ಶನ ವರದಿ
ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು
ಬಳ್ಳಾರಿ, ಸೆ.11: ನಗರದ ಕೌಲ್ ಬಜಾರ್ ಸಮೀಪದ ‘ನಲ್ಲಚೆರವು’ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಂದೋಬಸ್ತ್ನಲ್ಲಿ ಯಶಸ್ವಿಯಾಗಿ ತೆರವುಗೊಳಿಸಿದರು.
ಕೌಲ್ ಬಜಾರ್ ವಾರ್ಡ್ ನಂ.16ರ ಟಿ.ಎಸ್. ನಂ.21/1ಎ1 ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಕೆರೆಯ ಕೊಳಚೆ ನೀರನ್ನು ಮೋಟಾರ್ ಪಂಪ್ಸೆಟ್ ಮೂಲಕ ಹರಿಸಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯರಿಂದ ದೂರುಗಳು ಬಂದಿದ್ದವು.
ದೂರುಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯ ವೇಳೆ ಅಕ್ರಮವಾಗಿ ಅಳವಡಿಸಲಾಗಿದ್ದ ನೀರಾವರಿ ಪೈಪ್ಗಳು ಹಾಗೂ ಮೋಟಾರ್ಗಳನ್ನು ತೆರವುಗೊಳಿಸಿ, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಯಿತು.
ತೆರವುಗೊಳಿಸಿದ ಜಾಗದಲ್ಲಿ ‘ಇದು ಕರ್ನಾಟಕ ಸರ್ಕಾರದ ಸ್ವತ್ತು. ಇದನ್ನು ಒತ್ತುವರಿ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂಬ ಎಚ್ಚರಿಕೆ ನಾಮಫಲಕವನ್ನು ಅಳವಡಿಸಲಾಯಿತು.
ಇದೇ ವೇಳೆ, ಸ್ಥಳೀಯ ಕನಕ ದುರ್ಗಮ್ಮ ಗುಡಿಯಿಂದ ವಾಲ್ಮೀಕಿ ವೃತ್ತದತ್ತ ತೆರಳುವ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ನಿವೇಶನ ಜಾಗದ ಒತ್ತುವರಿಯನ್ನೂ ತೆರವುಗೊಳಿಸಲಾಯಿತು. ನಗರದ ವ್ಯಾಪ್ತಿಯಲ್ಲೇ ಇರುವ ಈ ಎರಡೂ ಜಾಗಗಳು ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ರಜುಬೇರ್, ಸರ್ಕಾರಿ ಜಮೀನು ಹಾಗೂ ಕೆರೆ-ಕಟ್ಟೆಗಳ ಒತ್ತುವರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿಯ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕಾರ್ಯಾಚರಣೆಯಲ್ಲಿ ಬಳ್ಳಾರಿ ತಾಲೂಕು ತಹಶೀಲ್ದಾರ್ ಟಿ.ರೇಖಾ, ಡಿಡಿಎಲ್ಆರ್ ಪ್ರಮೋದ್, ಕಂದಾಯ ಇಲಾಖೆಯ ಅಧಿಕಾರಿಗಳು, ಸರ್ವೆಯರ್ಗಳು, ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 