ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ: ಆಮ್‌ಆದ್ಮಿ ಪಕ್ಷದ ಆಗ್ರಹ
ಬೆಂಗಳೂರು, ಜೂ. 11, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು ಎಂಬುದನ್ನೇ ಪ್ರತಿಷ್ಠೆಯಾಗಿಸಿಕೊಂಡು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗೊಂದಲದ ನಡೆಯನ್ನು ಆಮ್ ಅದ್ಮಿ ಪಕ್ಷ ಖಂಡಿಸಿದೆ.ಈಗಾಗಲೇ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಪುದುಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ, ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಗ್ಗ ಜಗ್ಗಾಟ ನಡೆಸುತ್ತಾ, ಸದಾ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕೆಂಬ ಇರಾದೆ ಇಟ್ಟುಕೊಂಡು ಈ ರೀತಿಯಲ್ಲಿ ವರ್ತಿಸುತ್ತಿರುವ ಸಚಿವರ ನಡೆ ತೀರಾ ಖಂಡನೀಯ ಎಂದು ಆಪ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಹೇಳಿಕೆ ಬಿಡುಗಡೆ ಮಾಡಿದ್ದು, ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಯ ಸಲುವಾಗಿ ಹೀಗಾಗಲೇ 4 ಪೂರ್ವ ತಯಾರಿ ಪರೀಕ್ಷೆಗಳನ್ನು ಹಾಗೂ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕೊನೆಯ ಹಂತದ ಪರೀಕ್ಷೆಯಿಂದ ಮತ್ತೆ ಅವರ ಸಾಮರ್ಥ್ಯ ಸಾಬೀತು ಮಾಡಬೇಕು ಎನ್ನುವ ಹಠವೇಕೆ?. ದೇಶದ ಪ್ರಧಾನಿಗಳ ಜೀವ ಮೊದಲು ಜೀವನ ಆನಂತರ ಎನ್ನುವ ಘೋಷವಾಕ್ಯವನ್ನು ರಾಜ್ಯ ಬಿಜೆಪಿ ಸರ್ಕಾರ ಮರೆತಿರುವಂತಿದೆ. ಒಟ್ಟಾರೆ 15 ಲಕ್ಷ ಜನ ಈ ಪರೀಕ್ಷಾ ವ್ಯವಸ್ಥೆಗೆ ಕಾರ್ಯ ತತ್ಪರರಾಗಬೇಕಾದ ಅವಶ್ಯಕತೆ ನಿಜಕ್ಕೂ ಇದೆಯೇ ಎಂಬುದು ಪ್ರಶ್ನೆಯಾಗಿದೆ. ತಮ್ಮ ಪ್ರತಿಷ್ಠೆಗೆ ನಡೆಸುವ ಪರೀಕ್ಷೆಗಳಿಂದ ಮಕ್ಕಳ ಮೇಲಾಗುವ ಅವಘಡಗಳಿಗೆ ಸರ್ಕಾರ ಜವಾಬ್ದಾರಿಯಾಗುತ್ತದೆ.
ಈ ಪರೀಕ್ಷೆಯಿಂದ ಮುಂಬೈ ನಗರದ ರೀತಿಯ ಮತ್ತೊಂದು ಧಾರಾವಿ ಸೃಷ್ಟಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಸ್ಪೇನ್, ಅಮೆರಿಕಾದಂತಹ ಹಲವು ರಾಷ್ಟ್ರಗಳು ಇದೇ ರೀತಿಯ ಪರೀಕ್ಷೆಗಳಿಂದ ಸಾಕಷ್ಟು ಅವಘಡಗಳನ್ನು ಎದುರಿಸಿರುವುದು ನಮ್ಮ ಕಣ್ಮುಂದೆಯೇ ಇದೆ. ಆದ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಿ ಸಾಮೂಹಿಕವಾಗಿ ಉತ್ತೀರ್ಣಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ನಿರಾಳಗೊಳಿಸಬೇಕು. ತಜ್ಞರ ಸಮಿತಿಯನ್ನು ನೇಮಿಸಿ ಮುಂದಿನ ಹಂತದ ಶಿಕ್ಷಣ ದಾಖಲಾತಿಗೆ ಹೊಸ ಮಾನದಂಡಗಳನ್ನು ರೂಪಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ಅವರು ತಿಳಿಸಿದರು.ರಾಜ್ಯದ ಅನೇಕಾನೇಕ ಶಿಕ್ಷಣ ತಜ್ಞರು, ಪೋಷಕರುಗಳು ಹೀಗಾಗಲೇ ಪರೀಕ್ಷೆ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇದನ್ನು ಪ್ರಮುಖವಾಗಿ ಪರಿಗಣಿಸಬೇಕು. ಹೆಚ್ಚು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದರೂ ಇದುವರೆವಿಗೂ ಯಾರ ಮೇಲೂ ಕಠಿಣ ಕ್ರಮವನ್ನು ತೆಗೆದುಕೊಳ್ಳದ ಶಿಕ್ಷಣ ಸಚಿವರ ನಡೆ ಅನುಮಾನ ಮೂಡಿಸುವಂತಿದೆ. ಪೋಷಕರಿಗೆ ವಸೂಲಿ ಆಗಿರುವ ಹೆಚ್ಚುವರಿ ಶುಲ್ಕವನ್ನು ಹಿಂತಿರುಗಿಸುವಂತಹ ಕಠಿಣ ಆದೇಶಗಳನ್ನು ಹೊರಡಿಸಲು ಆಮ್ ಆದ್ಮಿ ಪಕ್ಷವು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 