ಕಡಿಮೆ ನೀರಿನಲ್ಲಿ ಸಮೃದ್ಧ ಬೆಳೆ: ಕುಂಬಳಕಾಯಿ ಬೆಳೆದ ರೈತ ಬಸವರಾಜ್
ಹೂವಿನಹಡಗಲಿ 14: ಬರಗಾಲದಂತಹ ಕಠಿಣ ಪರಿಸ್ಥಿತಿಯಲ್ಲೂ ಕಡಿಮೆ ನೀರಿನಲ್ಲಿ ಸಮೃದ್ಧವಾಗಿ ಬೆಳೆದು ರೈತರ ಕೈಹಿಡಿಯುವ ಪ್ರಮುಖ ತರಕಾರಿ ಬೆಳೆಯಾಗಿ ಕುಂಬಳಕಾಯಿ ಗುರುತಿಸಿಕೊಂಡಿದೆ. ಕಡಿಮೆ ನಿರ್ವಹಣೆ, ಉತ್ತಮ ಇಳುವರಿ ಹಾಗೂ ದೀರ್ಘಕಾಲ ಕೆಡದೆ ಬಾಳಿಕೆ ಬರುವ ಗುಣದಿಂದ ಬರಪೀಡಿತ ಪ್ರದೇಶಗಳ ರೈತರಿಗೆ ಇದು ಆರ್ಥಿಕವಾಗಿ ಹಾಗೂ ಆಹಾರ ಭದ್ರತೆಯ ದೃಷ್ಟಿಯಿಂದ ಸಹಕಾರಿಯಾಗಿದೆ.
ತಾಲೂಕಿನ ಸೋಗಿ ಗ್ರಾಮದ ಪ್ರಗತಿಪರ ರೈತ ಎಂ.ಬಿ. ಬಸವರಾಜ್ ಅವರು ಸುಮಾರು 15 ಎಕರೆ ಜಮೀನಿನಲ್ಲಿ ಕಡಿಮೆ ಅವಧಿಯಲ್ಲಿ ಕುಂಬಳಕಾಯಿ ಬೆಳೆ ಬೆಳೆಸಿದ್ದು, ಕೇವಲ 85 ದಿನಗಳಲ್ಲಿ ಫಸಲು ಕಟಾವಿಗೆ ಬಂದಿದೆ. ಉತ್ತಮ ಇಳುವರಿ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಈ ಬೆಳೆ ವಾರ್ಷಿಕವಾಗಿ ಲಕ್ಷಗಟ್ಟಲೆ ಆದಾಯ ತಂದುಕೊಡುವ ನೀರೀಕ್ಷೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಕುಂಬಳಕಾಯಿಗೆ ಹೊರ ರಾಜ್ಯಗಳ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದ್ದು, ಮುಂಬೈ ಮತ್ತು ಕೊಲ್ಕತ್ತಾ ಸೇರಿದಂತೆ ವಿವಿಧ ನಗರಗಳಿಗೆ ಉತ್ಪನ್ನವನ್ನು ರವಾನಿಸಲಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಮಾರುಕಟ್ಟೆ ದರ ದೊರೆಯುವಂತಾಗಿದೆ. ಸಾಂಪ್ರದಾಯಿಕ ಬೆಳೆಗಳ ಜತೆಗೆ ಕಡಿಮೆ ಅವಧಿಯಲ್ಲಿ ಕೈಗೆಟುಕುವ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪರ್ಯಾಯ ಬೆಳೆಗಳನ್ನು ಆಯ್ಕೆ ಮಾಡಿಕೊಂಡರೆ ಕೃಷಿಯಿಂದ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಎಂ.ಬಿ. ಬಸವರಾಜ್ ಅವರ ಪ್ರಯತ್ನ ಉತ್ತಮ ನಿದರ್ಶನವಾಗಿದೆ.