ವ್ಯಸನಮುಕ್ತ ಯುವಜನತೆಯಿಂದ ಬಲಿಷ್ಠ ದೇಶ ನಿರ್ಮಾಣ: ಎಂ.ಎಸ್. ಅಲ್ಲಾಬಕ್ಷ್
ಲೋಕದರ್ಶನ ವರದಿ
ಕಾರವಾರ ಆ.1 : ಉತ್ತಮ ಚಾರಿತ್ರ್ಯ, ಶಿಸ್ತು ಮತ್ತು ದೇಶಪ್ರೇಮ ಹೊಂದಿರುವ ವ್ಯಸನಮುಕ್ತ ಯುವಜನತೆಯೇ ದೇಶದ ಶಕ್ತಿ ಮತ್ತು ಭವಿಷ್ಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಆಡಳಿತ) ಎಂ.ಎಸ್. ಅಲ್ಲಾಬಕ್ಷ್ ಹೇಳಿದರು. ಬೀದರ್ನ ಶಿವಾಜಿ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಾಂಜಾ, ಕೊಕೇನ್, ಹೆರಾಯಿನ್ ಸೇರಿದಂತೆ ಮಾದಕ ವಸ್ತುಗಳ ಸೇವನೆ ಯುವಕರ ಆರೋಗ್ಯ ಮತ್ತು ಜೀವನವನ್ನು ಹಾಳುಮಾಡುತ್ತದೆ.
ಇಂತಹ ವಸ್ತುಗಳ ಸೇವನೆ, ಮಾರಾಟ ಹಾಗೂ ಸಾಗಾಟ ಕಾನೂನುಬದ್ಧವಾಗಿ ಗಂಭೀರ ಅಪರಾಧವಾಗಿದ್ದು, ಕಠಿಣ ಶಿಕ್ಷೆಗೆ ಒಳಪಡುತ್ತದೆ ಎಂದು ಎಚ್ಚರಿಸಿದರು. ಕಾಲೇಜು ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಜೀವನದ ಗುರಿ ಸಾಧನೆಗೆ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್, ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ ನಾಯಕ್, ವಾರ್ತಾ ಇಲಾಖೆಯ ರಾಜು ಯಲ್ಲಪ್ಪ ಭೋವಿ ಸೇರಿದಂತೆ ಅಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೇಟ್ ನಿರೂಪಿಸಿ ವಂದಿಸಿದರು.