ರಕ್ತದಾನ ಪರಮೋಚ್ಚ ಮಾನವೀಯ ಕಾರ್ಯ : ಪೋಳ

ರಕ್ತದಾನ ಪರಮೋಚ್ಚ ಮಾನವೀಯ ಕಾರ್ಯ : ಪೋಳ Blood donation is the supreme humanitarian act: Pola

ಲೋಕದರ್ಶನ ವರದಿ 

ಹಾರೂಗೇರಿ 04: ರಕ್ತದಾನವು ಕೇವಲ ಒಂದು ಪ್ರಕ್ರಿಯೆಯಲ್ಲ, ಅದು ಮತ್ತೊಂದು ಜೀವವನ್ನು ಉಳಿಸುವ ಪರಮೋಚ್ಚ ಮಾನವೀಯ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಉಮೇಶ ಪೋಳ ಹೇಳಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು ಕಲಿಸಿದ ಗುರುಗಳ ಸ್ಮರಣೆಗಾಗಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಕನಸಿನ ಕೂಸು ರಕ್ತದಾನದ ಪರಿಕಲ್ಪನೆಯೇ ವಿನೂತನವಾಗಿದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ನೀಗಿಸಲು ಇಂತಹ ಶಿಬಿರಗಳು ಪೂರಕವಾಗಿವೆ ಎಂದರು.

ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ ಮಾತನಾಡುತ್ತ ಸಮಾಜಕ್ಕೆ ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಸೇವಾ ಕಾರ್ಯಗಳು ಅಗತ್ಯವಾಗಿದೆ. ಸಮಾಜದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಜಿಲ್ಲಾಡಳಿತ ಮಾರ್ಗದರ್ಶನದಲ್ಲಿ ಎಲ್ಲ ಇಲಾಖೆಗಳ ನೌಕರರು ತೋರುತ್ತಿರುವ ನಿಸ್ವಾರ್ಥ ಸಾಮಾಜಿಕ ಕಾಳಜಿ ಮತ್ತು ಮಾನವೀಯ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ ಮಾತನಾಡಿ ರಕ್ತದಾನಕ್ಕೆ ಹಾರೂಗೇರಿಯಲ್ಲಿ 50 ಹಾಗೂ ರಾಯಬಾಗ ತಾಲೂಕು ಆಸ್ಪತ್ರೆಯಲ್ಲಿ 40 ಹಾಸಿಗೆಯ ಜೊತೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ರಕ್ತನಿಧಿ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡದವರು ರಕ್ತ ಸಂಗ್ರಹಣೆ ಮತ್ತು ತಪಾಸಣೆಯ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ನಾನಾ ಇಲಾಖೆಗಳ ಸರಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್‌ನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ದಾನಿಗಳಿಗೆ ಹಣ್ಣು, ಜ್ಯೂಸ್ ವಿತರಿಸಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಬೆಳಗಾವಿ ಜಿಲ್ಲಾ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ.ಸತೀಶ ಕಲ್ಲಟ್ಟಿ, ಬಿಸಿಯೂಟ ಅಧಿಕಾರಿ ರವೀಂದ್ರ ಪಾಟೀಲ, ತಾಲೂಕು ಸಂಪನ್ಮೂಲ ಅಧಿಕಾರಿ ಬಸವರಾಜ ಕಾಂಬಳೆ, ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಸಿಪಿಐ ರತನಕುಮಾರ ಜೀರಗ್ಯಾಳ, ತಾಪಂ ಎಇಇ ಮನವಡ್ಡರ, ಸಿದ್ಲಿಂಗಪ್ಪ ನರಗಟ್ಟಿ, ಲಕ್ಷ್ಮಣ ಜಾಯಗೋಣಿ, ಹಣಮಂತ ಅಥಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.