ಬಳ್ಳಾರಿ 27: ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಯಾವುದೇ ಕಾರಣಕ್ಕೂ ವಿಳಂಬವಾಗದೇ ನಿಗದಿತ ಸಮಯದಲ್ಲಿ ಜರುಗಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಏರಿ್ಡಸಿದ್ದ ಬೆಳೆ ಕಟಾವು ಪ್ರಯೋಗಗಳ ಪ್ರಗತಿ ಪರೀಶೀಲನೆ, ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಮತ್ತು ಜನನ-ಮರಣ ನಾಗರೀಕ ನೋಂದಣಿ ಪದ್ಧತಿಯ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನನ ಘಟನೆಗಳ ಪ್ರಮಾಣವು ವಾರ್ಷಿಕ ಅಂದಾಜು 30 ಸಾವಿರವಿದೆ. ಪ್ರತಿ ತಿಂಗಳು, ಪ್ರತಿ ಆಸ್ಪತ್ರೆಗಳಲ್ಲಿ ಎಷ್ಟು ಜನನ ಘಟನೆಗಳು ಸಂಭವಿಸುತ್ತಿವೆ ಹಾಗೂ ಎಷ್ಟು ಮಂದಿ ಜನನ ಪ್ರಮಾಣ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪರೀಶೀಲಿಸಿ, ಮಾಹಿತಿ ಸಂಗ್ರಹಿಸಬೇಕು. ಈ ಕುರಿತು ಆಯಾ ತಾಲ್ಲೂಕು ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅದೇರೀತಿಯಾಗಿ ಮರಣ ಘಟನೆಗಳನ್ನು ಹೇಗೆ ಗಣತಿ ಮಾಡುತ್ತೀರಿ ಎಂದು ವಿಚಾರಿಸಿದ ಜಿಲ್ಲಾಧಿಕಾರಿಗಳು, ಮರಣ ಘಟನೆಗಳು ಕೇವಲ ಆಸ್ಪತ್ರೆಗಳಲ್ಲಿ ಸಂಭವಿಸಿದರೆ ಗೊತ್ತಾಗುತ್ತದೆ, ಆದರೆ ಸಮುದಾಯದಲ್ಲಿ ನಡೆದ ಮರಣ ಘಟನೆಗಳನ್ನು ಸಹ ತಪ್ಪದೇ ಗಣತಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೆ.ಪತ್ರಿಬಸಪ್ಪ ಅವರು ಮಾತನಾಡಿ, 2025 ರ ಜನವರಿಯಿಂದ ಏಪ್ರಿಲ್ ರವರೆಗೆ ಜಿಲ್ಲೆಯಲ್ಲಿ ಜನನ ನೋಂದಣಿ ವಿವರ ಕುರಿತಂತೆ ಗಂಡು-4,827, ಹೆಣ್ಣು-4,361 ಸೇರಿ ಒಟ್ಟು 9,188 ಘಟನೆಗಳು ನೋಂದಣಿಯಾಗಿವೆ. ಅದೇರೀತಿಯಾಗಿ 2025 ರ ಜನವರಿಯಿಂದ ಏಪ್ರಿಲ್ ರವರೆಗೆ ಜಿಲ್ಲೆಯಲ್ಲಿ ಮರಣ ನೋಂದಣಿ ವಿವರ ಕುರಿತಂತೆ ಗಂಡು-2,608, ಹೆಣ್ಣು-1,775 ಮತ್ತು ಲಿಂಗತ್ವ ಅಲ್ಪಸಂಖ್ಯಾತರು-1 ಸೇರಿದಂತೆ ಒಟ್ಟು 4,384 ಘಟನೆಗಳು ನೋಂದಣಿಯಾಗಿವೆ ಎಂದು ಸಭೆಗೆ ತಿಳಿಸಿದರು.
ಜನನ ಘಟನೆಗಳು 21 ದಿನಗಳೊಳಗಾಗಿ ಸಂಭವಿಸಿದ್ದರೆ ಉಚಿತವಾಗಿ ಪ್ರಮಾಣ ಪತ್ರ ಪಡೆಯಬಹುದು. ಘಟನೆ ಸಂಭವಿಸಿ 21 ದಿನದಿಂದ 30 ದಿನಗಳೊಳಗಿದ್ದರೆ ಪ್ರಮಾಣ ಪತ್ರ ಪಡೆಯಲು ರೂ.20 ಪಾವತಿಸಬೇಕು. 30 ದಿನಗಳ ನಂತರ ಪಡೆಯುವಂತಿದ್ದಲ್ಲಿ ರೂ.50 ಪಾವತಿಸಬೇಕು ಎಂದು ಮಾಹಿತಿ ತಿಳಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಜನನ ಮತ್ತು ಮರಣ ಪ್ರಮಾಣ ವಿತರಣೆಯಲ್ಲಿ ಸಾರ್ವಜನಿಕರನ್ನು ವಿನಾಃಕಾರಣ ಅಲೆದಾಡಿಸುವಂತಿಲ್ಲ. ಮುಖ್ಯವಾಗಿ ಸುಳ್ಳು ಪ್ರಮಾಣ ಪತ್ರ ವಿತರಣೆ ಮಾಡುವಂತಿಲ್ಲ ಎಂದು ತಿಳಿಸಿದರು.
ಕೃಷಿ ಗಣತಿ ಕಾರ್ಯದಲ್ಲಿ ಸಹ ಈವರೆಗೆ ಜಿಲ್ಲೆಯಲ್ಲಿ ಬಿತ್ತನೆಯಾಗಿರುವುದು ಮತ್ತು ಬಿತ್ತನೆಯಾಗದಿರುವುದರ ಕುರಿತು ವಿವಿಧ ನಮೂನೆಗಳಲ್ಲಿ ಪ್ರಯೋಗದ ಮಾಹಿತಿಯನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರರು ತಪ್ಪದೇ ನಮೂದಿಸಬೇಕು ಎಂದು ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ಸಂಡೂರು ತಾಲ್ಲೂಕು ತಹಶೀಲ್ದಾರ ಅನೀಲ್ ಕುಮಾರ್ ಸೇರಿದಂತೆ ಕೃಷಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರರು ಉಪಸ್ಥಿತರಿದ್ದರು.