ಸಂಬರಗಿ 27: ನಾಗನೂರ ಪಿ.ಎ ಗ್ರಾಮದ ಸಂಜು ಕಾಂಬಳೆ ಇವರು ತೋಟದಲ್ಲಿ ಕೆಲಸ ಮಾಡಿ ತಮ್ಮ ಮಕ್ಕಳ ಜೊತೆಗೆ ಅಗ್ರಾಣಿ ನದಿ ದಾಟಿ ತಮ್ಮ ಗ್ರಾಮಕ್ಕೆ ಜೋಡೆತ್ತುಗಳ ಚಕ್ಕಡಿ ಗಾಡಿಯ ಮೂಲಕ ತೆರಳುವಾಗ ನೀರಿನಲ್ಲಿ ಕೊಚ್ಚಿ ಒಂದು ಎತ್ತು, ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಂಗಳವಾರ ಸಾಯಂಕಾಲ 5ಗಂಟೆಗೆ ನಡೆದಿದೆ.
ಘಟನೆಯ ವಿವರ: ಸಂಜು ಕಾಂಬಳೆ ತಮ್ಮ ಮಕ್ಕಳ ಹಾಗೂ ಜೋಡೆತ್ತುಗಳ ಮೂಲಕ ಅಗ್ರಾಣಿ ನದಿಯನ್ನು ದಾಟಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಸಾಲಂಕಾಲ ಜೋಡೆತ್ತು ಚಕ್ಕಡಿ ಗಾಡಿಯಲ್ಲಿ ತಮ್ಮ ಮಕ್ಕಳ ಜೊತೆಗೆ ಅವರ ಗ್ರಾಮಕ್ಕೆ ಬರುವ ವೇಳೆ ಅಗ್ರಾಣಿ ನದಿಯ ನೀರು ಪ್ರವಾಹ ಹೆಚ್ಚಾದ ನಂತರ ಜೋಡೆತ್ತುಗಳ ಚಕ್ಕಡಿ ಬಂಡಿ ಕೊಚ್ಚಿ ಹೋಯಿತು. ಅದರಲ್ಲಿ ದೀಪಕ ಸಂಜು ಕಾಂಬಳೆ ವಯಾ:08, ಗಣೇಶ ಸಂಜು ಕಾಂಬಳೆ ವಯಾ:06 ಇವರು ನದಿಯಲ್ಲಿ ಕೊಚ್ಚಿ ಹೋದ ನಂತರ ಅಗ್ರಾಣಿ ತೀರದಲ್ಲಿರುವ ರೈತರು ಹಾಗೂ ನಾಗನೂರ ಪಿ.ಎ ಗ್ರಾಮಸ್ಥರು ನದಿಗೆ ಹಾರಿ ಎರಡು ಮಕ್ಕಳ ಶವಗಳನ್ನು ನೀರಿನಿಂದ ಹೊರ ತೆಗೆದರು. ಸಂಬರಗಿ, ಕಲ್ಲೋತ್ತಿ ಹಾಗೂ ನಾಗನೂರ ಪಿ.ಎ ಗ್ರಾಮದ ಜನರು ದಾವಿಸಿ ಆ ಮಕ್ಕಳ ತಂದೆ ಸಂಜಯ ಸದಾಶಿವ ಕಾಂಬಳೆ ಹಾಗೂ ಮತ್ತೊಬ್ಬ ವೇದಾಂತ ಸಂಜಯ ಕಾಂಬಳೆ ಇವರನ್ನು ನೀರಿನಿಂದ ಹೊರ ತೆಗೆದು ಪ್ರಾಣಾಪಾಯದಿಂದ ಕಾಪಾಡಿದರು.
ಸುದ್ದಿ ತಿಳಿದ ನಂತರ ಘಟನಾ ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಶದ ಪಿ.ಎಸ್.ಐ ಮಲ್ಲಿಕಾರ್ಜುನ ಉಪ್ಪಾರ, ಸಿ.ಪಿ.ಐ ಸಂತೋಷ ಹಳ್ಳೂರ, ಡಿ.ಎಸ್.ಪಿ. ಪ್ರಶಾಂತ ಮುನ್ನೋಳ್ಳಿ, ಕಂದಾಯ ನೀರೀಕ್ಷಕರು ವಿನೋದ ಕದಮ್ ಘಟನಾ ಸ್ಥಳಕ್ಕೆ ತೆರಳಿ ಘಟನೆಯ ಮಾಹಿತಿ ಪಡೆದುಕೊಂಡರು. ನೀರಿನಲ್ಲಿ ಕೊಚ್ಚಿಹೋಗಿರುವ ಮಾಹಿತಿಯನ್ನು ಅವರ ತಂದೆ ಸಂಜು ಕಾಂಬಳೆ ಇವರಿಂದ ಪಡೆದುಕೊಂಡರು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿಶಾಮಕ ಠಾಣಾಧಿಕಾರಿ ಮಲಿಕ್‌ಜಾನ್ ಜಮಾದಾರ, ಸುಭಾನ ಫಿರಜಾದೆ, ಮಲ್ಲನಗೌಡ ಇವರ ತಂಡ ಸ್ಥಳಕ್ಕೆ ತೆರಳಿ ನೀರಿನಿಂದ ಮೃತ ದೇಹಗಳನ್ನು ಹೊರತೆಗೆದರು. ಈ ಘಟನೆಯಿಂದ ಸುತ್ತ-ಮತ್ತಲಿನ ಗ್ರಾಮದ ಜನರು ತಳಮಳ ವ್ಯಕ್ತಪಡಿಸಿದರು.
ತಂದೆ ಸಂಜು ಕಾಂಬಳೆ ಸಾವನ್ನಪ್ಪಿರುವ ತಮ್ಮ ಎರಡು ಮಕ್ಕಳನ್ನು ಅಪ್ಪಿಕೊಂಡು ಕಣ್ಣಿರು ಹಾಕಿದರು. ಮೂರು ಗ್ರಾಮಗಳ ಗ್ರಾಮಸ್ಥರು ಬಂದು ನೀರಿನಿಂದ ಸಂಜಯ ಕಾಂಬಳೆ, ಮಗ ವೇದಾಂತ ಕಾಂಬಳೆ, ಒಂದು ಎತ್ತು, ಚಕ್ಕಡಿ ಬಂಡಿ ಇವರನ್ನು ನೀರಿನಿಂದ ಹೊರತೆಗೆದು ಪ್ರಾಣಾಪಾಯದಿಂದ ಪಾರು ಮಾಡಿದರು. ಘಟನೆ ಆದ ನಂತರ ನೂರಾರು ಜನರು ಅಗ್ರಾಣಿ ದಡಕ್ಕೆ ಬಂದು ಕಾರ್ಯಾಚರಣೆ ಮಾಡಿದರು. ಅಗ್ರಾಣಿ ನದಿ ದಾಟುವಾಗ ರಸ್ತೆ ಬದಿಗೆ ಸುಮಾರು 20-30 ಫೂಟ್ ಗುಂಡಿಯಲ್ಲಿ ಚಕ್ಕಡಿ ಬಂಡಿ ಪಲ್ಟಿಯಾಗಿದೆ.