ಭಾರತ್ ಜೋಡೋ ಮ್ಯಾರಾಥಾನ್ ಗೆ ಚಾಲನೆ

 ಭಾರತ್ ಜೋಡೋ ಮ್ಯಾರಾಥಾನ್ ಗೆ ಚಾಲನೆ Bharat Jodo Marathon flagged off

ಲೋಕದರ್ಶನ ವರದಿ 

ಕಾರವಾರ 29: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮಾಲಾದೇವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಮ್ಯಾರಾಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮತ್ತು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಶನಿವಾರ ಚಾಲನೆ ನೀಡಿದರು.  ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಉತ್ತಮ ಆರೋಗ್ಯ ಹೊಂದಿರುವುದು ಅಗತ್ಯವಾಗಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. 

ರಾಜ್ಯ ಸರ್ಕಾರವು 16 ರಿಂದ 35 ವರ್ಷದೊಳಗಿನ ಯುವ ಜನತೆಯಲ್ಲಿ ಯುವ ನಾಯಕತ್ವವನ್ನು ನಿರ್ಮಿಸಲು ಮತ್ತು ಕ್ರೀಡೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸುತ್ತಿದ್ದು, ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಘಗಳ ಸದಸ್ಯತ್ವನ್ನು ಪಡೆಯುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಸ್ವಾಗತಿಸಿ ವಂದಿಸಿದರು.  ಮಾಲಾದೇವಿ ಕ್ರೀಡಾಂಗಣದಿಂದ ಸವಿತಾ ಸರ್ಕಲ್, ಡಿಸಿ ಕಚೇರಿ, ಎಸ್‌.ಪಿ. ಕಚೇರಿ,  ಅರ್ಜುನ್ ಥಿಯೇಟರ್ ರಸ್ತೆಯ ಮೂಲಕ ಮ್ಯಾರಾಥಾನ್ ನಡೆಯಿತು. ಸುಮಾರು 200 ಕ್ಕೂ ಅಧಿಕ ಮಂದಿ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದು, ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ವಿತರಿಸಲಾಯಿತು.