ಮಾನವೀಯ ಮೌಲ್ಯಗಳ ಭಂಡಾರ ವಚನ ಸಾಹಿತ್ಯ: ಡಾ.ಎಂ ಸೋಮಕ್ಕ

ಹೊಸಪೇಟೆ 24: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊಸಪೇಟೆ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಕಮಲಾಪುರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕಮಲಾಪುರ ಇವರ ಸಹಯೋಗದಲ್ಲಿ ಎಚ್ ಜಿ.ರಂಗನಗೌಡ ದತ್ತಿ, ದಮಯಂತಿ ಬಾಯಿ ಹರಕಚಂದ ಪಾಲರೇಚಾ ದತ್ತಿ ಹಾಗೂ ದಿ.ಸತ್ಯನಾರಾಯಣ ಸಿಂಗ್ ಅವರುಗಳ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಕಮಲಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಎಂ.ಸೋಮಕ್ಕನವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಮಹತ್ವದ ಕುರಿತು ದತ್ತಿ ಉಪನ್ಯಾಸವನ್ನು ನೀಡುತ್ತಾ, ಮೂರನೇಯ ಶತಮಾನದಿಂದಲೇ ವಚನ ಸಾಹಿತ್ಯಕ್ಕೆ ತನ್ನದೇಯಾದ ಇತಿಹಾಸವಿದ್ದು, ವಚನ ಚಳುವಳಿಯ ಮೂಲಕ ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಹಾಗೂ ವೈಚಾರಿಕವಾಗಿ ಮಾನವೀಯ ಮೌಲ್ಯಗಳನ್ನು ಕೊಟ್ಟಂತಹ ಸಾಹಿತ್ಯವೇ ವಚನ ಸಾಹಿತ್ಯವೆಂದು ತಿಳಿಸಿದರು.  

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸುಧಾ ಅವರು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾ ಕಾಲೇಜು ಮಕ್ಕಳಿಗೆ ಆಗಾಗ ಇಂತಹ ದತ್ತಿ ಉಪನ್ಯಾಸ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹಳ ಮಹತ್ವಪೂರ್ಣವಾದದ್ದೆಂದು ಹೇಳಿದರು.  

ಕನ್ನಡ ಸಾಹಿತ್ಯ ಪರಿಷತ್ತು ಹೊಸಪೇಟೆ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಎಲ್‌.ಹಾಲ್ಯಾನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ   ಎಲ್‌.ಬಿ.ಕೃಷ್ಣನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್‌.ಡಿ.ಎಂ.ಸಿ.ಯ ಉಪಾಧ್ಯಕ್ಷ ಲಕ್ಷ್ಮಣ್, ಹಳ್ಳಿ ಜಂಬಯ್ಯ, ಪುರಸಭೆ ಸದಸ್ಯರಾದ ಮಾಳಗಿ ರಾಮಸ್ವಾಮಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ರಮೇಶ್, ಉಪನ್ಯಾಸಕ ನಿಸಾರ್ ಅಹಮದ್ ಹಾಗೂ ಹೋಬಳಿ ಘಟಕದ ಅಧ್ಯಕ್ಷ ಉದೇದಪ್ಪ ಉಪಸ್ಥಿತರಿದ್ದರು. 

ಕಾಲೇಜಿನ ವಿದ್ಯಾರ್ಥಿನಿಯರಾದ ಈಶ್ವರಿ ಮತ್ತು ತಂಡದವರು ಪ್ರಾರ್ಥಿಸಿದರು. ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಕೆ.ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕ ಕೆ.ಪ್ರಭು ವಂದಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತು ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ವಿ.ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು.