ಭೈರದೇವನಹಳ್ಳಿ: ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ

ಬಳ್ಳಾರಿ,ಏ.12: ಬಳ್ಳಾರಿ ಲೋಕಸಭಾ ಚುನಾವಣೆಗೆ ಮೇ 07 ರಂದು ಮತದಾನ ನಡೆಯಲಿದ್ದು, ಅಂದು ನಡೆಯುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಭೈರದೇವನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರಾರೆಡ್ಡಿ ಅವರು ಹೇಳಿದರು. 

ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಇಂದು, ಬಳ್ಳಾರಿ ತಾಲ್ಲೂಕಿನ ಭೈರದೇವನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಭೈರದೇವನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಹಾಗೂ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ಅವರು ಮಾತನಾಡಿದರು. 

ಮೇ 7 ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕು. ಭೈರದೇವನಹಳ್ಳಿ ಗ್ರಾಮದಲ್ಲಿ ಅತಿಹೆಚ್ಚು ಮತದಾನವಾಗುವಂತೆ ನರೇಗಾ ಕೂಲಿಕಾರರು ಕೈಜೋಡಿಸಬೇಕು ಎಂದರು. 

ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನ ಆರಂಭವಾಗಿದ್ದು, ನರೇಗಾ ಕೆಲಸಕ್ಕೆ ಕಲ್ಲೂರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಭೈರದೇವನಹಳ್ಳಿ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾ.ಪಂ ಐಇಸಿ ಸಂಯೋಜಕರು. ಬಿಎಫ್‌ಟಿ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.