ರೈತನೊಂದಿಗೆ ದುರ್ವರ್ತನೆ ಆರೋಪ: ಬೇವುರು ಪಿಎಸ್‌ಐ ವರ್ಗಾವಣೆ

ರೈತನೊಂದಿಗೆ ದುರ್ವರ್ತನೆ ಆರೋಪ: ಬೇವುರು ಪಿಎಸ್‌ಐ ವರ್ಗಾವಣೆ  Bevuru PSI transferred over allegations of misconduct with a farmer

ಯಲಬುರ್ಗಾ 22 :   ಅನ್ನದಾತನೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕಿನ ಬೇವುರು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ (ಪಿಎಸ್‌ಐ) ಗುರುರಾಜ್ ಟಿ. ಅವರನ್ನು ಇಲಾಖೆ ತಕ್ಷಣದಿಂದಲೇ ವರ್ಗಾವಣೆ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊ ಆಧರಿಸಿ ಬಳ್ಳಾರಿ ವಲಯದ ಐಜಿಪಿ ಡಾ. ಪಿ.ಎಸ್‌. ಹರ್ಷ ಕ್ರಮ ಕೈಗೊಂಡಿದ್ದಾರೆ.  

ಘಟನೆ ಹಿನ್ನೆಲೆ  

ಬೇವುರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದು ವಿಂಡ್ಫಾರ್ಮ್‌ ಕಾಮಗಾರಿ ನಡೆಸುತ್ತಿದ್ದ ವೇಳೆ, ಜಮೀನು ಹಾಗೂ ಬೆಳೆ ಹಾನಿಗೆ ಪರಿಹಾರ ನೀಡುವ ವಿಚಾರವಾಗಿ ರೈತ ಮತ್ತು ಕಂಪನಿ ಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪಿಎಸ್‌ಐ ಗುರುರಾಜ್ ಟಿ. ಅವರು ರೈತನೊಂದಿಗೆ ಅಸಭ್ಯವಾಗಿ ವರ್ತಿಸಿ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  

ವಿಡಿಯೊ ವೈರಲ್  

ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೊ ಬಹಿರಂಗವಾಗುತ್ತಿದ್ದಂತೆಯೇ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.  

ಐಜಿಪಿಗೆ ದೂರು  

ರೈತ ಹಾಗೂ ಸ್ಥಳೀಯ ಮುಖಂಡರು ಪಿಎಸ್‌ಐ ವಿರುದ್ಧ ಬಳ್ಳಾರಿ ವಲಯದ ಐಜಿಪಿ ಡಾ. ಪಿ.ಎಸ್‌. ಹರ್ಷ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ಕರ್ತವ್ಯ ಲೋಪ ಹಾಗೂ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ನಡೆಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.  

ಇಲಾಖಾ ಕ್ರಮ  

ದೂರಿನ ಗಂಭೀರತೆ ಹಾಗೂ ವೈರಲ್ ವಿಡಿಯೊವನ್ನು ಪರಿಗಣಿಸಿದ ಐಜಿಪಿ ಡಾ. ಪಿ.ಎಸ್‌. ಹರ್ಷ ಅವರು ಪ್ರಾಥಮಿಕ ಪರೀಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು ಹಾಗೂ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದ ಆರೋಪದ ಮೇರೆಗೆ ಪಿಎಸ್‌ಐ ಗುರುರಾಜ್ ಟಿ. ಅವರನ್ನು ಬೇವುರು ಪೊಲೀಸ್ ಠಾಣೆಯಿಂದ ತಕ್ಷಣದಿಂದಲೇ ಡಿಸಿಐಬಿ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.