ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ

ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ Grand Kona Biduva (Buffalo Release) Ritual: Inaugural Event of the Sankeshwar Mahalakshmi Fair Kicks

ಸಂಕೇಶ್ವರ : ಪ್ರತಿ 11 ವರ್ಷಗಳಿಗೊಮ್ಮೆ ನಡೆಯುವ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯನ್ನು 2027ರಲ್ಲಿ ವೈಭವದಿಂದ ನಡೆಸಲು ನಿರ್ಧರಿಸಲಾಗಿದ್ದು, ಅದರ ಪ್ರಥಮ ಧಾರ್ಮಿಕ ವಿಧಿಯಾದ ಕೋಣ ಬಿಡುವ ಕಾರ್ಯಕ್ರಮದ ಜೊತೆ ಚೊಚ್ವಲು ಕಾರ್ಯ ಮಂಗಳವಾರ ಅದ್ದೂರಿಯಾಗಿ ನೆರವೇರಿತು.


    ಬೆಳಿಗ್ಗೆ 8 ಗಂಟೆಗೆ ಹಕ್ಕುದಾರರು, ಯಾತ್ರಾ ಸಮಿತಿ ಸದಸ್ಯರು ಹಾಗೂ ಭಕ್ತರು ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಂತೋಷ ಪುಂಡಲೀಕ ಹವಾಲ್ದಾರ್ ಅವರ ನಿವಾಸಕ್ಕೆ ತೆರಳಿದರು. ಖಾತೇದಾರ ಪಾಟೀಲ ಮನೆತನದ ಕುನಾಲಗೌಡ ಪಾಟೀಲ ದಂಪತಿ ಅವರು ಹವಾಲ್ದಾರ್ ಕುಟುಂಬಕ್ಕೆ ಸಮವಸ್ತ್ರ ನೀಡಿ ಉಡಿ ತುಂಬುವ ಸಂಪ್ರದಾಯ ನೆರವೇರಿಸಿದರು. ಪ್ರತಿಯಾಗಿ ಹವಾಲ್ದಾರ್ ಕುಟುಂಬದವರು ಖಾತೇದಾರರಿಗೆ ಅರಿಶಿನ-ಕುಂಕುಮ ನೀಡಿ ಗೌರವ ಸಲ್ಲಿಸಿದರು.

   ಬಳಿಕ ಖಾತೇದಾರರು ಹಾಗೂ ಹವಾಲ್ದಾರ್ ಕುಟುಂಬಸ್ಥರು ಕೋಣಕ್ಕೆ ಪೂಜೆ ಸಲ್ಲಿಸಿ, ಯಾತ್ರಾ ಸಮಿತಿ ಮತ್ತು ಹಕ್ಕುದಾರರ ಪರವಾಗಿ ದಿಲೀಪ್ ಆಸೋದೆ ಅವರು ಕೋಣವನ್ನು ವಶಕ್ಕೆ ಪಡೆದರು. ನಂತರ ವಾದ್ಯಮೇಳ, ಭಜನೆ ಹಾಗೂ ಗುಲಾಲ್ ಎರಚುವ ಸಂಭ್ರಮದ ನಡುವೆ ಭೂಶಾಳ ಲಕ್ಷ್ಮೀ ದೇವಸ್ಥಾನಕ್ಕೆ ಕೋಣವನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಅಲ್ಲಿಂದ ಖಾತೇದಾರರ ಮನೆ, ಹಕ್ಕುದಾರರ ಮನೆ ಹಾಗೂ ಶಂಕರಾಚಾರ್ಯರ ಮಠಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಮತ್ತೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕರೆತರಲಾಯಿತು.


    ಈ ವೇಳೆ ಮಾತನಾಡಿದ ದಿಲೀಪ್ ಆಸೋದೆ ಅವರು, "ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಜಾತ್ರೆ ನಡೆಸುತ್ತಿರುವುದು ಸಂತಸದ ವಿಷಯ. ದೇವಿಯ ಕೃಪೆಯಿಂದ ಎಲ್ಲರಿಗೂ ಒಳಿತಾಗಲಿ" ಎಂದು ಪ್ರಾರ್ಥಿಸಿದರು. ಬಳಿಕ ಧಾರ್ಮಿಕ ವಿಧಿ-ವಿಧಾನಗಳಂತೆ ಕೋಣವನ್ನು ಬಿಡಲಾಯಿತು. ಕಾರ್ಯಕ್ರಮದ ನಂತರ ಭಕ್ತರು ಭೂಶಾಳ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದು ಪೂಜೆ ಸಲ್ಲಿಸಿದರು.

    ಕೋಣ ಬಿಡುವ ವೇಳೆ ಸುರಿದ ಮಳೆಯು ಭಕ್ತರಲ್ಲಿ ವಿಶೇಷ ಸಂಭ್ರಮ ಮೂಡಿಸಿತು. ಇದನ್ನು ದೇವಿಯ ಅನುಗ್ರಹದ ಸಂಕೇತ ಹಾಗೂ ಉತ್ತಮ ಮಳೆ-ಬೆಳೆಗಿರುವ ಶುಭಸೂಚನೆ ಎಂದು ಅನೇಕರು ಅಭಿಪ್ರಾಯಪಟ್ಟರು. ಕೆಲವರು ದೇವಿಯ ಶಕ್ತಿಯ ಅನಾವರಣವೇ ಇದಾಗಿದೆ ಎಂದು ಭಕ್ತಿಭಾವದಿಂದ ಹೇಳಿದರು.

   ಈ ಸಂದರ್ಭದಲ್ಲಿ ಹಕ್ಕದಾರರಾದ ಸಾಯಿಗೌಡಾ ಸಚೀನ ಪಾಟೀಲ, ಕುನಾಲ್ ಪಾಟೀಲ, ಗಿರೀಶ್ ಕುಲಕರ್ಣಿ, ಬಸವಣ್ಣಿ ಕರ್ದೆಗೌಡಾ, ಅಪ್ಪಾಸಾಹೇಬ ಶಟ್ಟಿಮನಿ, ಕಮಿಟಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಉಪಾಧ್ಯಕ್ಷ ಅಮರ ನಲವಡೆ, ಕಾರ್ಯಾಧ್ಯಕ್ಷ ಸುನಿಲ್ ಪರ್ವತರಾವ್, ಕಾರ್ಯದರ್ಶಿ ಬಸನಗೌಡಾ ಪಾಟೀಲ, ಸಹಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಬಂಡು ಹತನೂರೆ, ಸಂಜಯ ಶಿರಕೋಳಿ, ನಂದು‌ ಮುಡಸಿ, ಗಜಾನನ ಕ್ಚಳ್ಳಿ, ರೋಹನ್ ನೇಸರಿ, ಸುಭಾಷ್ ಕಾಸಾರಕರ್, ಎಮ್.ಬಿ.ಘಸ್ತಿ, ಮಹಾದೇವ ಕೇಸರಕರ್, ಪಿಂಟು ಕೋಳಿ, ಅಭಿಜಿತ್ ಕುರಣಕರ, ಸಂಜು ಹಿರೇಮಠ, ಚಿದಾನಂದ ಕರ್ದನ್ನವರ, ದಸ್ತಗಿರಿ ತೆರಣಿ, ಮಂದಾರ ಹಾವಳ, ಡಾ. ಜಯಪ್ರಕಾಶ್ ಕರಜಗಿ, ಸುನಿಲ ಸಪಾಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಸುಮಾರು 2 ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಕ್ತಿಭಾವ ಮತ್ತು ಸಂಭ್ರಮದಿಂದ ಕೋಣ ಬಿಡುವ ಸಂಪ್ರದಾಯವನ್ನು ಸಾಕ್ಷಿಯಾದರು.