ಅಂಗನವಾಡಿ ಕಾರ್ಯಕರ್ತೆಯರಿಂದ ಬೆಂಗಳೂರು ಚಲೋ: ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ

ಬೆಂಗಳೂರು, ಜ.23 , ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ  ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ  ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ  ಗುರುವಾರದಿಂದ  ಬೆಂಗಳೂರು ಚಲೋ ಆರಂಭಿಸಿದ್ದಾರೆ.ರಾಜ್ಯದ ವಿವಿಧ ಮೂಲೆಗಳಿಂದ  ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಸಾವಿರಾರು ಅಂಗಡಿವಾಡಿ ನೌಕರರು  ಅಲ್ಲಿಂದ ಫ್ರೀಡಂ ಪಾರ್ಕ್ ಮೈದಾನದ ವರೆಗೂ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ  ಅಲ್ಲಿ ಸಮಾವೇಶಗೊಂಡರು.

ತಮ್ಮ ಬೇಡಿಕೆಗಳನ್ನು  ಈಡೇರಿಸುವರೆಗೂ ’ಬೆಂಗಳೂರು ಬಿಟ್ಟು ಹೋಗುವುದಿಲ್ಲ’ ಎಂದು ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.ಈ ವೇಳೆ ಮಾತನಾಡಿದ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಅಂಗನವಾಡಿಗಳಿಗೆ ಮಾರಕವಾಗಿರುವ  ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಸೇವಾ ಹಿರಿತನವನ್ನು  ಪರಿಗಣಿಸುವ ಮೂಲಕ ವರ್ಷಕ್ಕೆ  200 ಭತ್ಯೆ ಹೆಚ್ಚಳ, ವೈದ್ಯಕೀಯ ಸೌಲಭ್ಯ, ರಜೆ  ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು  ಎಂದರು.

ಕಾರ್ಯಕರ್ತೆ ಶಶಿಕಲಾ ಅರಳ್ಳಿ ಮಾತನಾಡಿ, ಐಸಿಡಿಎಸ್ ಯೋಜನೆ ಪ್ರಾರಂಭವಾಗಿ ಇಂದಿಗೆ 42  ವರ್ಷಗಳು ಕಳೆದಿವೆ, ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ನಿರ್ವಹಿಸಿದ ಬಹಳಷ್ಟು ಜನ 60  ವರ್ಷ ಪೂರ್ಣಗೊಳಿಸಿ ಬರಿಗೈಯಲ್ಲಿ ನಿವೃತ್ತಿ ಹೊಂದಿದ್ದಾರೆ, ಬೆಳವಣಿಗೆ ಹಂತದಲ್ಲೇ ಬಡ  ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳಿಗೆ ಸರ್ಕಾರದ ಭಾಗವಾಗಿ ಕೆಲಸ ನಿರ್ವಹಿಸಿಕೊಂಡು  ಬಂದಿದ್ದೇವೆ. ಹೀಗಿದ್ದರೂ ನಮ್ಮ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ ಎಂದು  ತಿಳಿಸಿದರು.

ರಾಜ್ಯದಲ್ಲಿ 1.30 ಲಕ್ಷ ನೌಕರರು ಇದ್ದಾರೆ. ಮೂರು ತಿಂಗಳಿನಿಂದ ವೇತನ, ಮೊಟ್ಟೆ ಪೂರೈಕೆಯ ಹಣ  ನೀಡಿಲ್ಲ. ಇದರಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. 45 ವರ್ಷಗಳಿಂದ ಗೌರವಧನದ  ಆಧಾರದಲ್ಲಿ ದುಡಿಯುತ್ತಿದ್ದು, ಕಾಯಂ ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳಲ್ಲೇ ಕಾನ್ವೆಂಟ್  ತೆರೆಯಬೇಕು. ನಿವೃತ್ತಿಯಾದವರಿಗೆ ಕನಿಷ್ಠ  5 ಸಾವಿರ ಪಿಂಚಣಿ ನೀಡಬೇಕು. ಸೇವಾ ಹಿರಿತನದ  ಮೇಲೆ ಗೌರವಧನ ಹೆಚ್ಚಳ ಮಾಡಬೇಕು. ತೀವ್ರ ಕಾಯಿಲೆ ಬಿದ್ದಾಗ ಉಚಿತ ಚಿಕಿತ್ಸೆ, ವೇತನ  ಸಹಿತ ರಜೆ ನೀಡಬೇಕು. 21 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಇಎಸ್‌ಐ, ಭವಿಷ್ಯ  ನಿಧಿ, ಗ್ರ್ಯಾಚುಟಿ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ  ವೇತನ ಜಾರಿ ಮಾಡಬೇಕು. 45 ಎಲ್‌ಐಸಿ ಯ ಶಿಫಾರಸ್ಸಿನ ಪ್ರಕಾರ 16 ಸಾವಿರ ಕನಿಷ್ಠ ವೇತನ  ಜಾರಿ ಮಾಡಬೇಕು. ದಿನಕ್ಕೆ 6.30 ಗಂಟೆ ಕೆಲಸ ಮಾತೃಪೂರ್ಣ ಮುಂತಾದ ಕೆಲಸ ಹೊರೆಗಳು  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಮತ್ತೊಂದಡೆ ಬೆಲೆ ಏರಿಕೆ, ಮಾತ್ರವಲ್ಲದೆ  ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ  ರಾಜ್ಯಗಳಲ್ಲಿ 11 ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ  ಕೂಡಾ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನವನ್ನು  ನಿಗದಿಪಡಿಸಬೇಕು ಎಂದು ಧರಣಿನಿರತ ನೌಕರರು ಒತ್ತಾಯಿಸಿದರು.