ಮೋದಿ ತಾಯಿ ಕುರಿತು ಹೇಳಿಕೆ ಖಂಡಿಸಿ ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ

ಮೋದಿ ತಾಯಿ ಕುರಿತು ಹೇಳಿಕೆ ಖಂಡಿಸಿ ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ   BJP protests in Ballari condemning remarks about Modi's mother


ಬಳ್ಳಾರಿ, ಸೆ.25: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶುಕ್ರವಾರ ನಗರದ ರಾಯಲ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಯಿತು.  

ಇಂಡೋನೇಷ್ಯಾದಲ್ಲಿ ನಡೆದ ‘ಚಾತ್ರೋಂ ಕಿ ಗೂಂಜ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಕರಿಸುವ ಪ್ರದರ್ಶನದ ವೇಳೆ ಆಕ್ಷೇಪಾರ್ಹ ಹೇಳಿಕೆಗಳು ಕೇಳಿಬಂದಿವೆ ಎಂದು ಬಿಜೆಪಿ ಆರೋಪಿಸಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.  

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ರಾಜಕೀಯ ವಿಚಾರಗಳಲ್ಲಿ ಟೀಕೆ-ಟಿಪ್ಪಣಿಗಳಿಗೆ ಅವಕಾಶವಿದ್ದರೂ ವೈಯಕ್ತಿಕ ನಿಂದನೆಗೆ ಅವಕಾಶ ಇರಬಾರದು. ಸಾರ್ವಜನಿಕ ಜೀವನದಲ್ಲಿ ಮೌಲ್ಯಾಧಾರಿತ ರಾಜಕೀಯ ನಡೆ ಅಗತ್ಯ ಎಂದು ಹೇಳಿದರು.  

ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಮೋಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹಂಪಿ ರಮಣ, ಅಡವಿ ಸ್ವಾಮಿ, ಕೆ.ಎಸ್‌.ಡಿ. ಅಚ್ಚುತ, ಶರಣಗೌಡ ಆರ್‌., ಪುಷ್ಪಲತಾ, ನವೀನ್ ಕುಮಾರ್ ಟಿ.ಎಚ್‌., ರಾಮರೆಡ್ಡಿ, ದೊಡ್ಡ ಬಸವ ಸಿಂದಿಗೇರಿ, ಅಂಬಣ್ಣ, ನವೀನ್ ರೆಡ್ಡಿ, ಬಸವರಾಜ್, ಲಾಲಿ ಸ್ವಾಮಿ, ಶಿವಶಂಕರ್, ವೆಂಕಟೇಶ್, ಶೇಖರಗೌಡ, ಮಂಜುನಾಥ್, ರವಿ ಸೇರಿದಂತೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.