ಬಿಜೆಪಿ ಸಮಾವೇಶ: ಬಳ್ಳಾರಿಯಲ್ಲಿ ಸಂಚಾರ ಮಾರ್ಗ ಬದಲಾವಣೆ

ಬಿಜೆಪಿ ಸಮಾವೇಶ: ಬಳ್ಳಾರಿಯಲ್ಲಿ ಸಂಚಾರ ಮಾರ್ಗ ಬದಲಾವಣೆ  BJP Rally: Traffic Route Changes in Ballari


ಬಳ್ಳಾರಿ, ಸೆ. 9: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೆ. 10ರಂದು ಬಿಜೆಪಿ ಪಕ್ಷದ ವತಿಯಿಂದ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್‌ ಕೈಗೊಂಡಿದೆ.  

ಸಮಾವೇಶದ ಸಂದರ್ಭದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಸೂಚನೆಗಳನ್ನು ಹೊರಡಿಸಿದ್ದಾರೆ.  

ಭದ್ರತೆಗೆ ಬೃಹತ್ ಪೊಲೀಸ್ ಪಡೆ  

ಸಮಾವೇಶವು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿಯುತವಾಗಿ ನಡೆಯಲು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಭದ್ರತೆ ಒದಗಿಸಲಾಗಿದೆ.  

ಬಂದೋಬಸ್ತ್‌ ಕರ್ತವ್ಯಕ್ಕಾಗಿ 3 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 4 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 12 ಡಿವೈಎಸ್ಪಿಗಳು, 40 ಸಿಪಿಐ/ಪಿಐಗಳು, 63 ಪಿಎಸ್‌ಐಗಳು, 120 ಎಎಸ್‌ಐಗಳು, 960 ಹೆಡ್ ಕಾನ್ಸ್ಟೆಬಲ್‌/ಕಾನ್ಸ್ಟೆಬಲ್ಗಳು, 200 ಹೋಂಗಾರ್ಡ್ಗಳು, 12 ಆರ್ಬಿಐ/ಕೆಎಸ್‌ಆರ​‍್ಿ ತುಕಡಿಗಳು, 6 ಡಿಎಆರ್ ತುಕಡಿಗಳು ಹಾಗೂ 1 ಕ್ಯೂಆರ್ಟಿ ತುಕಡಿಯನ್ನು ನಿಯೋಜಿಸಲಾಗಿದೆ.  

ನಿರ್ಬಂಧಿತ ಹಾಗೂ ಬದಲಾದ ಮಾರ್ಗಗಳು  

ಸಾರ್ವಜನಿಕರು ಗಡಗಿ ಚೆನ್ನಪ್ಪ ವೃತ್ತ, ಇಂದಿರಾ ವೃತ್ತ, ದುರ್ಗಮ್ಮ ದೇವಾಲಯ ಸರ್ಕಲ್, ಎಸ್‌.ಪಿ. ವೃತ್ತ ಹಾಗೂ ಎಚ್‌.ಆರ್‌.ಗವಿಯಪ್ಪ ವೃತ್ತದ ರಸ್ತೆಗಳನ್ನು ಬಳಸದೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.  

ಸಿರುಗುಪ್ಪ ಕಡೆಯಿಂದ ಬರುವ ವಾಹನಗಳು ವಾಲ್ಮೀಕಿ ವೃತ್ತ (ಎಸ್‌.ಪಿ. ಸರ್ಕಲ್), ದುರ್ಗಮ್ಮ ಗುಡಿ ಸರ್ಕಲ್ ಮಾರ್ಗವಾಗಿ ಮೋಕಾ ರಸ್ತೆಯನ್ನು ಬಳಸಬೇಕು. ಬೆಂಗಳೂರಿನಿಂದ ಬರುವ ವಾಹನಗಳು ಅನಂತಪುರ ಬೈಪಾಸ್ ರಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.