ಕಲಾ ಗ್ಯಾಲರಿ ಸಂಸ್ಕೃತಿಯನ್ನು ಬೆಳೆಸಬೇಕು: ಡಾ. ಪರಶುರಾಮ ಪಿ.

ಕಲಾ ಗ್ಯಾಲರಿ ಸಂಸ್ಕೃತಿಯನ್ನು ಬೆಳೆಸಬೇಕು: ಡಾ. ಪರಶುರಾಮ ಪಿ. Art gallery culture must be fostered: Dr. Parashurama P

ಲೋಕದರ್ಶನ ವರದಿ 

 ಕಲಬುರಗಿ 19: ಕಲಾವಿದರು ಸೃಜನಶೀಲ ಚಿತ್ರಕಲಾಕೃತಿಗಳನ್ನು ರಚಿಸುವುದರ ಜೊತೆಗೆ ಕಲಾ ಗ್ಯಾಲರಿ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಪರಶುರಾಮ ಪಿ. ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದಲ್ಲಿ ಕಲಬುರಗಿ ನಗರದ ರಾಮಮಂದಿರ ಹಿಂಭಾಗದಲ್ಲಿರುವ ಬಿಸಿಲು ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿದ್ದ ಯಾದಗಿರಿಯ ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಕಾಲೀನ ಕಲಾ ಮಾರುಕಟ್ಟೆಯ ಪರಿಚಯ, ವೀಕ್ಷಕರ ಅಭಿರುಚಿ, ಕಲಾಸಕ್ತಿಯ ಜೊತೆಗೆ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ನಡೆಯುವ ಕಲಾ ಪ್ರದರ್ಶನಗಳ ಅರಿವು ಕಲಾವಿದರಿಗೆ ಅಗತ್ಯ. ಕಲಾವಿದರು ತಮ್ಮ ಕೃತಿಗಳನ್ನು ಪ್ರದರ್ಶಿಸುವ ಸಂದರ್ಭದಲ್ಲಿ ಗ್ಯಾಲರಿಯ ಅಳತೆ ಮತ್ತು ಆಕಾರಕ್ಕೆ ಅನುಗುಣವಾಗಿ ಸೂಕ್ತ ಸಂಖ್ಯೆಯ ಕಲಾಕೃತಿಗಳನ್ನು ಆಯ್ಕೆ ಮಾಡಿ, ಅವುಗಳಿಗೆ ಹೊಂದುವ ವಾತಾವರಣದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ ಪ್ರದರ್ಶಿಸಿದ ವರ್ಣಚಿತ್ರಗಳಲ್ಲಿ ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಚಿತ್ರಕಲಾ ಶೈಲಿಗಳ ಪ್ರಭಾವ ಮತ್ತು ಪ್ರೇರಣೆ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡು ಗಂಭೀರ ಹಾಗೂ ಗುಣಮಟ್ಟದ ಕಲಾಕೃತಿಗಳನ್ನು ರಚಿಸಲಿ ಎಂದು ಅವರು ಆಶಿಸಿದರು. ಶಶಿಕಾಂತ ಪಾಟೀಲ, ವಿಜಯ, ಕಾವ್ಯ ಗಡ್ಡಿ, ಸಿದ್ದರಾಮಯ್ಯ, ಅಭಿಜಿತ್ ಎಸ್‌.ಕೆ. ಸೇರಿದಂತೆ ಕಲಾವಿದರು, ಕಲಾ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭಾಗವಹಿಸಿದ್ದರು. ಕಲಾವಿದ ಸೂರ್ಯಕಾಂತ ನಂದೂರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.