ವಿಶಿಷ್ಟ ಜನಪದ ಸಂಸ್ಕೃತಿಯ ಜೋಕುಮಾರನ ಆಗಮನ

ವಿಶಿಷ್ಟ ಜನಪದ ಸಂಸ್ಕೃತಿಯ ಜೋಕುಮಾರನ ಆಗಮನ  Arrival of Jokumar of unique folk culture


ಸವದತ್ತಿ: ತಾಲೂಕಿನ ಸಿಂದೋಗಿ ಗ್ರಾಮದ ಮಾರುತಿ ಬಡಾವಣೆಯಲ್ಲಿ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸುವ ವಿಶಿಷ್ಟ ಜನಪದ ಸಂಸ್ಕೃತಿಯ ಹಬ್ಬವಾದ ಜೋಕುಮಾರನ ಆಗಮನ ಭಾನುವಾರ ಸಂಭ್ರಮದಿಂದ ನಡೆಯಿತು.  

ಉತ್ತರ ಕರ್ನಾಟಕದಲ್ಲಿ ಜೋಕುಮಾರನನ್ನು ಮಳೆ ತರಿಸುವ ಹಾಗೂ ಕೃಷಿಯನ್ನು ಕಾಪಾಡುವ ಜನಪದ ದೈವವೆಂದು ಆರಾಧಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಕ್ಕ ಬಾರಕೇರ, ಸಕ್ಕೂಬಾಯಿ ಬಾರಕೇರ ಹಾಗೂ ಯಲ್ಲಕ್ಕ ಬಾರಕೇರ ಸೇರಿದಂತೆ ಮಹಿಳೆಯರು ಜೋಕುಮಾರನ ಸಾಂಕೇತಿಕ ಪ್ರತಿಮೆಯನ್ನು ಹೊತ್ತು ಮನೆಮನೆಗೆ ತೆರಳಿದರು.  ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಜನಪದ ಗೀತೆಗಳನ್ನು ಹಾಡಿ, ಉತ್ತಮ ಮಳೆಯಾಗಬೇಕು ಹಾಗೂ ಬೆಳೆಗಳು ಸಮೃದ್ಧವಾಗಿ ಬೆಳೆಯಬೇಕು ಎಂದು ಪ್ರಾರ್ಥಿಸಿ, ನೈವೇದ್ಯ ಅರ​‍್ಿಸಿದರು.  

ಸಾಮಾನ್ಯವಾಗಿ ಗಣೇಶ ಹಬ್ಬದ ನಂತರದ ಭಾದ್ರಪದ ಹುಣ್ಣಿಮೆ ಅಥವಾ ಅನಂತ ಚತುರ್ದಶಿಯ ಸಂದರ್ಭದಲ್ಲಿ ಈ ಆಚರಣೆ ನಡೆಯುತ್ತದೆ. ಜೋಕುಮಾರನ ಪ್ರತಿಮೆ ಏಳು ದಿನಗಳ ಕಾಲ ಗ್ರಾಮದಲ್ಲಿ ಸಂಚರಿಸಲಿದ್ದು, ಬಳಿಕ ವಿಧಿವಿಧಾನಗಳೊಂದಿಗೆ ವಿಸರ್ಜಿಸುವ ಮೂಲಕ ಹಬ್ಬದ ಆಚರಣೆ ಮುಕ್ತಾಯಗೊಳ್ಳಲಿದೆ.  ಗ್ರಾಮೀಣ ಸೊಗಡಿನ ಈ ವಿಶಿಷ್ಟ ಸಂಪ್ರದಾಯದಲ್ಲಿ ಬಡಾವಣೆಯ ಮಹಿಳೆಯರು ಹಾಗೂ ಗ್ರಾಮಸ್ಥರು ಭಕ್ತಿಯಿಂದ ಪಾಲ್ಗೊಂಡಿದ್ದರು.