ಶ್ರಾವಣ ಮಾಸದಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ

ಶ್ರಾವಣ ಮಾಸದಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ  Arrangements for Mahaprasada for devotees during the month of Shravana


ಅಥಣಿ, ಆ.25: ಶ್ರಾವಣ ಮಾಸದ ಒಂದು ತಿಂಗಳ ಕಾಲ ಬರುವ ಭಕ್ತರಿಗೆ ಮಹಾಪ್ರಸಾದ ನೀಡುವ ವ್ಯವಸ್ಥೆಯನ್ನು ಅಥಣಿ-ಖಿಳೇಗಾಂವ್ ರಸ್ತೆಯ ಮಾಳಿನಗರದಲ್ಲಿರುವ ಹನುಮಾನ್ ದೇವಸ್ಥಾನದ ಆವರಣದಲ್ಲಿ ಮಾಡಲಾಗಿದೆ.  

ಶ್ರಾವಣ ಮಾಸದ ಪ್ರತಿದಿನ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುತ್ತಿದ್ದು, ಉಪವಾಸ ಮಾಡುವ ಭಕ್ತರಿಗೆ ತ್ವರಿತವಾಗಿ ಸೇವಿಸಬಹುದಾದ ಆಹಾರ ಹಾಗೂ ಇತರ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.  

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಖಿಳೇಗಾಂವ್ ಬಸವೇಶ್ವರ ದೇವಸ್ಥಾನವು ಎರಡು ರಾಜ್ಯಗಳ ಮಧ್ಯವರ್ತಿಯಂತಿದ್ದು, ವಾಹನಗಳಿಗಿಂತ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆಯೇ ಹೆಚ್ಚಿನದಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ವಿವಿಧೆಡೆ ಭಕ್ತರಿಗೆ ಚಹಾ, ಉಪಾಹಾರ ಹಾಗೂ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸುವ ಅಗತ್ಯವಿತ್ತು.  

ಈ ಕಾರ್ಯಕ್ಕೆ ಕೈಗಾರಿಕೋದ್ಯಮಿ ಮಾಣಿಕ ಸೂರ್ಯವಂಶಿ ಅವರು ಮುಂದಾಗಿದ್ದು, ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ಹನುಮಂತನ ದರ್ಶನ ಪಡೆದು ಮಹಾಪ್ರಸಾದ ಸೇವಿಸಿದ ಬಳಿಕ ಭಕ್ತರು ಬಸವೇಶ್ವರ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.  

15-20 ವರ್ಷಗಳ ಸೇವಾ ಪರಂಪರೆ  

ಮಾಣಿಕ ಸೂರ್ಯವಂಶಿ ಮಾತನಾಡಿ, ಭಕ್ತರಿಗೆ ಮಹಾಪ್ರಸಾದ ವಿತರಿಸುವ ಸೇವೆ ಕಳೆದ 15ಹಿ20 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆಯಾಗಿದೆ. ಶ್ರಾವಣ ಮಾಸದಲ್ಲಿ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.  

ದೇವರ ದರ್ಶನಕ್ಕೆ ಎಷ್ಟು ಭಕ್ತರು ಆಗಮಿಸುತ್ತಾರೆ ಎಂಬುದನ್ನು ಮುಂಚಿತವಾಗಿ ತಿಳಿಸಿದರೆ, ಅದಕ್ಕೆ ಅನುಗುಣವಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುವುದು. ಭಕ್ತರು ಮುಂಚಿತವಾಗಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.