ಬಡವರ ವಿರೋಧಿ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ: ಎಚ್‌.ಕೆ. ಪಾಟೀಲ

ಗದಗ: ಮೇ 7ರಂದು ನಡೆಯುವ ಚುನಾವಣೆ ಅತೀ ಮಹತ್ವದ ಚುನಾವಣೆಯಾಗಿದ್ದು, ಬಡವರು ಮತ್ತು ಉಳ್ಳವರ ನಡುವಿನ ಚುನಾವಣೆಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು. 

ನಗರದ 9ನೇ ವಾರ್ಡಿನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಪರವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದರೆ ಅನೇಕ ಪಕ್ಷಗಳು ವಿವಿಧ ರೀತಿಯಲ್ಲಿ ಅಡ್ಡಿಪಡಿಸುತ್ತಿದ್ದಾರೆ. ಹೊಸ ಗ್ಯಾರಂಟಿ ಯೋಜನೆಗಳಿಗೂ ಅಡ್ಡಿಯಾಗಿ ದೂರು ನೀಡುತ್ತಿದ್ದಾರೆ. ಇದರಿಂದ ನ್ಯಾಯಾಲಯವು ಕೂಡ ಒಂದು ಪಕ್ಷ ನೀಡುವ ಗ್ಯಾರಂಟಿ ಹಾಗೂ ಭರವಸೆಗಳು ಆ ಪಕ್ಷಕ್ಕೆ ಬಿಟ್ಟಿದ್ದು ಎಂದು ದೂರು ನೀಡಿದ ಪಕ್ಷಗಳಿಗೆ ಛೀಮಾರಿ ಹಾಕಿದೆ ಎಂದು ಹೇಳಿದರು.  

ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 8ನೇ ಮಾಸಿಕ ಕಂತು ಬಂದಿದೆ. ಗೃಹಜ್ಯೋತಿ ಈಗಾಗಲೇ 200 ಯುನಿಟ್ ಬಳಕೆದಾರರಿಗೆ ಝೀರೋ ಬಿಲ್ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿದೆ. ಒಂದು ಕುಟುಂಬಕ್ಕೆ ಗ್ಯಾರಂಟಿ ಯೋಜನೆಗಳ ಮೂಲಕ ಮಾಸಿಕ 5 ಸಾವಿರ ರೂಪಾಯಿಯಂತೆ ವಾರ್ಷಿಕ 60 ಸಾವಿರ ರೂಪಾಯಿಯನ್ನು ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 1.10 ಕೋಟಿ ಕುಟುಂಬವನ್ನು ಬಡತನ ರೇಖೆಗಿಂತ ಮೇಲೆತ್ತುವ ಕೆಲಸ ಮಾಡಿದ್ದೇವೆ ಎಂದರು. 

ನುಡಿದಂತೆ ನಡೆದಿದ್ದೇವೆ. ನಿಮಗೆ ಕೊಟ್ಟ ಆಶ್ವಾಸನೆಯನ್ನು ಪೂರೈಸಿದ್ದೇವೆ. ಗದಗ-ಬೆಟಗೇರಿ ಅವಳಿ ನಗರದ 9ನೇ ವಾರ್ಡ್‌ ರೈತರ ವಾರ್ಡ ಆಗಿದ್ದು, ರೈತರ ಆದಾಯ ದುಪ್ಪಟ್ಟಾಗುವ ಬದಲು ಖರ್ಚು ದುಪ್ಪಟ್ಟಾಗತೊಡಗಿದೆ. ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಧಾನಿ ನರೇಂದ್ರ ಪ್ರತಿ ಕುಟುಂಬಕ್ಕೆ ಜನಧನ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ ಹಾಕದೇ ಮೋಸ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ. ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯಸೂತ್ರವನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತಾರೆ ಎಂಬ ಕಟ್ಟುಕಥೆಗಳನ್ನು ಹೇಳುವ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸ್ವತಃ ಮೋದಿ ಅವರೇ ಭಾರತ ಮಾತೆಯ ಆಭರಣಗಳಾದ ರೈಲು, ರಸ್ತೆ, ಏರ್‌ಪೋರ್ಟ್‌, ವಿದ್ಯುತ್ ಕಂಪನಿಗಳು, ಬಂದರುಗಳು ಸೇರಿ ಒಂದೊಂದರಂತೆ ಆಭರಣಗಳನ್ನು ಕಿತ್ತು ಆದಾನಿ, ಅಂಬಾನಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ದೇಶದ, ಬಡವರ, ದುಡಿಯುವವರ ಹಿತದೃಷ್ಟಿಯಿಂದ ತಮ್ಮ-ತಮ್ಮಲ್ಲಿನ ಮನಸ್ತಾಪಗಳನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. 

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀರೀಕ್ಷೆ ಮೀರಿ ಸ್ಪಂದನೆ ದೊರೆಯುತ್ತಿದೆ. ಮಹಿಳೆಯರು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ನಮಗೆ ಗೊತ್ತಿಲ್ಲದ ರೀತಿಯಲ್ಲಿ ಹೊಸ ಅಲೆಯೊಂದು ಸೃಷ್ಟಿಯಾಗುತ್ತಿದೆ. ಅತೀ ಹೆಚ್ಚು ಮತದಾರರನ್ನು ಕರೆದುಕೊಂಡು ಬಂದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಬೇಕು ಎಂದು ಮನವಿ ಮಾಡಿದರು. 

9ನೇ ವಾರ್ಡಿನ ಸದಸ್ಯ ಚಂದ್ರು ಕರಿಸೋಮನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 9ನೇ ವಾರ್ಡಿನ ಮತದಾರರು ಕಡಿಮೆ ಲೀಡ್ ಕೊಟ್ಟಿದ್ದರು. ಈ ಬಾರಿ ಯುವಕರು, ಮತದಾರರು ಅಧಿಕ ಮತ ನೀಡಿ ಹೆಚ್ಚು ಲೀಡ್ ಕೊಡುವ ಮೂಲಕ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. 

ಮುಖಂಡರಾದ ವೀರನಗೌಡ ಪಾಟೀಲ, ಶ್ರೀರಾಮ ಶಿಂಧೆ, ಹೇಮಚಂದ್ರ ಕಬಾಡಿ, ಅಜ್ಜನಗೌಡ ಹಿರೇಮನಿಪಾಟೀಲ, ಮಲ್ಲಿಕಾರ್ಜುನ ಕಲ್ಮನಿ, ಟೀಕಾನಸಾ ಅರವಟಗಿ, ಪ್ರಕಾಶ ಬಡಿಗೇರ, ಭೀಮಣ್ಣ ಪೂಜಾರ, ಬಾಬು ಬದಿ, ಸದಾನಂದ ಮೇರವಾಡೆ, ಮಲ್ಲೇಶಪ್ಪ ಪಲ್ಲೇದ, ಮಲ್ಲು ಬಾರಕೇರ, ಚನ್ನಪ್ಪ ಕೌಜಗೇರಿ, ಸಾದಿಕ್ ಬಳ್ಳಾರಿ, ಬಸವರಾಜ ಬಾರಕೇರ, ಗೂಳಪ್ಪ ರೊಟ್ಟಿ, ಮೇಘಾ ಮುದಗಲ್, ಸುಮಾ ಸುಗಂಧಿ, ಪಾರವ್ವ ಜಕ್ಕಲಿ, ವಿದ್ಯಾ ಗೋಂದಕರ, ಮಾಳವ್ವ, ಜಯಶ್ರೀ ಪೂಜಾರ, ಲಕ್ಷ್ಮೀ ಕೌಜಗೇರಿ ಸೇರಿ ಅನೇಕರು ಇದ್ದರು.