ಅಧಿಕಾರ ದುರ್ಬಳಕೆ ಆರೋಪ: ಕೊಪ್ಪಳ ಕಿಮ್ಸ್‌ ಆಡಿಟೋರಿಯಂನಲ್ಲಿ ನಿಯಮಬಾಹಿರವಾಗಿ ಪಿ.ಓ.ಪಿ ತೆರವು; ಸರ್ಕಾರಕ್ಕೆ ಆರ್ಥಿಕ ನಷ್ಟ

ಅಧಿಕಾರ ದುರ್ಬಳಕೆ ಆರೋಪ: ಕೊಪ್ಪಳ ಕಿಮ್ಸ್‌ ಆಡಿಟೋರಿಯಂನಲ್ಲಿ ನಿಯಮಬಾಹಿರವಾಗಿ ಪಿ.ಓ.ಪಿ ತೆರವು; ಸರ್ಕಾರಕ್ಕೆ ಆರ್ಥಿಕ ನಷ್ಟ Allegations of abuse of power: Illegal eviction of POP at Koppal KIMS Auditorium; Financial loss to

ಲೋಕದರ್ಶನ ವರದಿ

ಕೊಪ್ಪಳ 08:  ಇಲ್ಲಿನ ಕಿಮ್ಸ್‌ ಕೊಪ್ಪಳ ವೈದ್ಯಕೀಯ ವಿಜ್ಙಾನಗಳ ಸಂಸ್ಥೆಯ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ನಡೆದಿರುವ ಘಟನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಅಧಿಕಾರ ದುರ್ಬಳಕೆ ಹಾಗೂ ಸರ್ಕಾರಿ ಹಣ ಪೋಲಾಗಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜಿನ 450 ಆಸನಗಳ ಸಾಮರ್ಥ್ಯದ ಸುಸಜ್ಜಿತ ಆಡಿಟೋರಿಯಂನಲ್ಲಿದ್ದ ಪಿ.ಓ.ಪಿ ಕೆಲಸವನ್ನು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ತೆರವುಗೊಳಿಸಲಾಗಿದೆ ಎಂಬ ಗಂಭೀರ ಸತ್ಯ ಅಧಿಕೃತ ಪತ್ರದ ಮೂಲಕ ಬಹಿರಂಗಗೊಂಡಿದೆ. 

ನಿಯಮಗಳ ಉಲ್ಲಂಘನೆ ಮತ್ತು ಕಡತಗಳ ನಾಪತ್ತೆ: ಕಿಮ್ಸ್‌ ಮುಖ್ಯ ಆಡಳಿತಾಧಿಕಾರಿಗಳು ನೀಡಿರುವ ಅಧಿಕೃತ ಪತ್ರದ ಪ್ರಕಾರ, ಈ ಪಿ.ಓ.ಪಿ ತೆರವು ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಅಥವಾ ಯಾವುದೇ ಸಂಬಂಧಿತ ಉನ್ನತ ಇಲಾಖೆಯಿಂದ ಅಧಿಕೃತ ಆದೇಶವಾಗಲಿ ಅಥವಾ ಅನುಮತಿಯಾಗಲಿ ಸಿಕ್ಕಿಲ್ಲ. ಇಷ್ಟೂ ಅಲ್ಲದೆ, ಇಂತಹ ದೊಡ್ಡ ಮಟ್ಟದ ಕಾಮಗಾರಿ ಅಥವಾ ತೆರವು ಪ್ರಕ್ರಿಯೆಗೆ ಕಡ್ಡಾಯವಾಗಿ ನಡೆಯಬೇಕಾದ ಯಾವುದೇ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿಲ್ಲದಿರುವುದು ಪತ್ತೆಯಾಗಿದೆ. ಅಲ್ಲಿ ತೆಗೆಯಲಾದ ವಸ್ತುಗಳು ಸಹ ಸ್ಥಳದಲ್ಲಿ ಇರುವದಿಲ್ಲ 

ರಜೆಯ ಅವಧಿಯಲ್ಲಿ ನಡೆದ ಕೃತ್ಯ: ಮುಖ್ಯ ಆಡಳಿತಾಧಿಕಾರಿಗಳು ದಿನಾಂಕ 03.06.2026 ರಂದು ರಜೆಯಲ್ಲಿದ್ದ ಸಂದರ್ಭವನ್ನು ಬಳಸಿಕೊಂಡು ಈ ಆಡಳಿತಾತ್ಮಕ ಕ್ರಮ ಜರುಗಿಸಲಾಗಿದೆ. ಪಿ.ಓ.ಪಿ ಯನ್ನು ಯಾವ ದಿನಾಂಕದಂದು ಮತ್ತು ಯಾರ ಆದೇಶದ ಮೇರೆಗೆ ಕಿತ್ತುಹಾಕಲಾಗಿದೆ ಎಂಬ ಬಗ್ಗೆ ಯಾವುದೇ ಪಾರದರ್ಶಕ ಮಾಹಿತಿ ಲಭ್ಯವಿಲ್ಲ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಡತಗಳನ್ನು ಮುಖ್ಯ ಆಡಳಿತಾಧಿಕಾರಿಗಳ ಗಮನಕ್ಕೆ ತರದೆ ಈ ಕೆಲಸ ಮಾಡಿರುವುದು ನೇರವಾದ ಅಧಿಕಾರ ದುರ್ಬಳಕೆಯನ್ನು ಎತ್ತಿ ತೋರಿಸುತ್ತದೆ. ಸದರಿ ದಿನಾಂಕಕ್ಕೂ ಮೊದಲೇ ತೆರವುಗೊಳಿಸಲಾಗಿದೆ. ಕೇವಲ ಕೆಲವು ಸಾವಿರ ರುಪಾಯಿಗಳಲ್ಲಿ ದುರಸ್ಥಿಗೊಳಿಸಬಹುದಾದ ಕೆಲಸಕ್ಕೆ ಅಪಾರ ಹಣ ಪೋಲು ಮಾಡಲಾಗಿದೆ. 

ಸರ್ಕಾರಿ ಸ್ವತ್ತಿಗೆ ಹಾನಿ: ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಸುಸ್ಥಿತಿಯಲ್ಲಿದ್ದ ಆಡಿಟೋರಿಯಂ ಪಿ.ಓ.ಪಿ ಯನ್ನು ಕಾನೂನುಬಾಹಿರವಾಗಿ ಧ್ವಂಸ ಮಾಡಿರುವುದರಿಂದ ಸರ್ಕಾರಕ್ಕೆ ಸುಮಾರು 30 ರಿಂದ 35 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಅವ್ಯವಹಾರದ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರಿಗೆ ಈಗಾಗಲೇ ಪತ್ರದ ಪ್ರತಿಗಳನ್ನು ರವಾನಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬಂದಿದೆ. 

ಕಿಮ್ಸ್‌ ಆಡಿಟೋರಿಯಂ ಹಾಲ್‌ನಲ್ಲಿನ ಪಿ.ಓ.ಪಿ ಕೆಲಸದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಕೋರಿದ್ದ ಮಾಹಿತಿಗೆ ಉತ್ತರ ನೀಡಿದ್ದು, ಪತ್ರದಲ್ಲಿರುವ ಮುಖ್ಯ ಸಾರಾಂಶದ ಪ್ರಕಾರ ಬಿ. ಕಲ್ಲೇಶ ಮುಖ್ಯ ಆಡಳಿತಾಧಿಕಾರಿಗಳು, ಕಿಮ್ಸ್‌ ಕೊಪ್ಪಳ ಅವರು ಮಂಜುನಾಥ ಜಿ. ಗೊಂಡಬಾಳ ಎನ್ನುವವರಿಗೆ ನೀಡಿರುವ ಮಾಹಿತಿಯಿಂದ ವಿಷಯ ಬಹಿರಂಗಗೊಂಡಿದೆ. 

ಈ ಪಿ.ಓ.ಪಿ ತೆರವುಗೊಳಿಸಲು ಅಥವಾ ಸಂಬಂಧಿತ ಇಲಾಖೆಯಿಂದ ಯಾವುದೇ ಅಧಿಕೃತ ಅನುಮತಿ ಅಥವಾ ಆದೇಶ ಪಡೆದಿರುವ ಮಾಹಿತಿ ಮುಖ್ಯ ಆಡಳಿತಾಧಿಕಾರಿಗಳ ಗಮನಕ್ಕೆ ಬಂದಿಲ್ಲ. ಈ ಕುರಿತ ಕಡತವು ಅವರ ಮೂಲಕ ಸಾಗಿಲ್ಲ ಮತ್ತು ಅವರು ಅನುಮತಿಯನ್ನೂ ನೀಡಿಲ್ಲ, ಆದ್ದರಿಂದ ಕಿಮ್ಸ್‌ ನಿರ್ದೇಶಕರು ಇದರಲ್ಲಿ ನೇರವಾಗಿ ಪಾಲ್ಗೊಂಡಿರುವದು ಕಾಣಿಸುತ್ತದೆ, ಅವರ ಮೇಲೆ ಈಗಾಗಲೇ ಹಲವಾರು ಸಲ ಆರೋಪಗಳು ಬಂದಿದ್ದು, ಈ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.